ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ 1ನೇ ವಾರ್ಡ್ ಜಿ.ಪಿ.ಮಲ್ಲಪ್ಪಪುರಂ 5ನೇ ಬೀದಿಯ ರಸ್ತೆಯಲ್ಲಿ ಚರಂಡಿ ನಿರ್ಮಿಸದೆ ಕಳಪೆ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು. ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಬೇಕು, ಇಲ್ಲವಾದರೆ ಪ್ರತಿಭಟನೆ ನಡೆಸುವುದಾಗಿ ನಗರಸಭೆ ಪೌರಾಯುಕ್ತರಿಗೆ ನಿವಾಸಿಯೊಬ್ಬರು ಲಿಖಿತ ಪತ್ರ ನೀಡಿ ಎಚ್ಚರಿಸಿದ್ದಾರೆ.
1ನೇ ವಾರ್ಡ್ ಜಿ.ಪಿ.ಮಲ್ಲಪ್ಪಪುರಂನಲ್ಲಿರುವ ಐಇಎಲ್‌ಸಿ ಶಾಲೆಯ ಮುಂಭಾಗ 5ನೇ ಬೀದಿಯ ರಸ್ತೆ ಇದೆ. ಈ ರಸ್ತೆಯಲ್ಲಿರುವ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್‌ರಾಜ್ ಅವರ ಮನೆಯಿಂದ ಸರ್ಕಾರಿ ನಿವೃತ್ತ ನೌಕರ ರಾಮಚಂದ್ರ ಅವರ ಮನೆಯವರೆಗೆ ನಿರ್ಮಾಣ ಮಾಡುತ್ತಿರುವ ಕಾಮಗಾರಿಯಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ, ಕಳಪೆ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಏಕೆಂದರೆ, ಚರಂಡಿ ನಿರ್ಮಾಣ ಮಾಡದೇ ಕೇವಲ ರಸ್ತೆ ನಿರ್ಮಿಸಿದರೆ ಮಳೆ ಬಂದರೆ ನೀರು ನೇರವಾಗಿ ರಸ್ತೆ ಬದಿಯಲ್ಲಿರುವ ಮನೆಗಳಿಗೆ ತುಂಬಿಕೊಳ್ಳುತ್ತದೆ. ಆದ ಕಾರಣ ಈಗ ನಡೆಯುತ್ತಿರುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಹೊಸದಾಗಿ ಚರಂಡಿಯನ್ನು ನಿರ್ಮಿಸಬೇಕು. ನಂತರ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಬೇಕು. ಒಂದು ವೇಳೆ ನಮ್ಮ ಮನವಿಯನ್ನು ತಿರಸ್ಕರಿಸಿ ಚರಂಡಿ ನಿರ್ಮಿಸದೆ ರಸ್ತೆ ಕಾಮಗಾರಿ ಮುಂದುವರಿಸಿದರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮತ್ತು ಸ್ಥಳಿಯ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ನಿವಾಸಿ ದಿಲೀಪ್ ಪೌರಾಯುಕ್ತ ರಮೇಶ್ ಅವರಿಗೆ ಲಿಖಿತವಾಗಿ ಮನವಿ ಪತ್ರ ನೀಡಿ ಎಚ್ಚರಿಸಿದ್ದಾರೆ.