ಕಳಪೆ ಬೀಜ, ಗೊಬ್ಬರ ಮಾರಬೇಡಿ

Don't sell poor quality seeds and fertilizers
Published on

ಬ್ಯಾಡಗಿ: ರೈತರಿಗೆ ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರುವುದು ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಬೀಜ, ಗೊಬ್ಬರ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿದ್ದು, ಹಲವು ಯೋಜನೆ ಜಾರಿಗೊಳಿಸಿದೆ. ಕೆಲ ಮಾರಾಟಗಾರರು ಕಳಪೆ ಬೀಜ, ಗೊಬ್ಬರ ಮಾರಾಟದಿಂದ ರೈತರಿಗೆ ಸಮಸ್ಯೆ ತಂದಿದ್ದಾರೆ. ತಪ್ಪು ಮಾಡಿದ ಬೀಜ ಕಂಪನಿ ಹಾಗೂ ಮಾರಾಟಗಾರರನ್ನು ಸರ್ಕಾರ ಕ್ಷಮಿಸಲ್ಲ. ರೈತರಿಗೆ ಅನ್ಯಾಯವಾದಲ್ಲಿ ಸರ್ಕಾರ ಸುಮ್ಮನಿರಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ರೈತರಿಗೆ ಬೀಜ ಕೇಂದ್ರಗಳಲ್ಲಿ ಅಧಿಕೃತ ಬೀಜ, ಗೊಬ್ಬರ ದಾಸ್ತಾನಿದೆ.ಬ್ಯಾಡಗಿ, ಕಾಗಿನೆಲೆ, ಮೋಟೆಬೆನ್ನೂರ, ಚಿಕ್ಕಬಾಸೂರ, ಹೆಡಿಗ್ಗೊಂಡ, ಬನ್ನಿಹಟ್ಟಿ ಗ್ರಾಮಗಳಲ್ಲಿ ಬೀಜ ವಿತರಣೆ ಕೇಂದ್ರಗಳನ್ನು ತೆರೆಯಲಾಗುವುದು. ಹತ್ತಿ, ಗೋವಿನಜೋಳ ಹಾಗೂ ಜೋಳ ಪೂರೈಸಲು ಪ್ರಸ್ತಾವನೆ ಸಲ್ಲಿಸಿದ್ದು, ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ವಿತರಣೆ ಸುಸೂತ್ರವಾಗಿ ಜರುಗಲಿದೆ. ಎಲ್ಲ ಅಂಗಡಿಗಳಲ್ಲಿ ಪಿಒಎಸ್ ಯಂತ್ರ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಬೀಜ ಕೇಂದ್ರಗಳು ಕ್ರಮಬದ್ಧವಾಗಿರುವ ಪ್ಯಾಕೇಟ್ ಹೊರತುಪಡಿಸಿ ಖುಲ್ಲಾ ಬಿತ್ತನೆ ಬೀಜಗಳನ್ನು ಮಾರಬಾರದು. ಕಳಪೆ ಬೀಜಗಳು ರೈತನಿಗೆ ಹೆಚ್ಚು ನಷ್ಟ ತಂದುಕೊಡಲಿವೆ. ನಕಲಿ ಬೀಜ, ಗೊಬ್ಬರ ಮಾರಾಟದ ಜಾಲದ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸ್ಥಳೀಯ ವಿನಾಯಕ ಆಗ್ರೋ ಕೇಂದ್ರದಲ್ಲಿ ಖರೀದಿಸಿ ನಾಟಿ ಮಾಡಿದ ಸುಮಾರು 50 ಎಕರೆ ಬೆಳೆ ಹಸಿ ಮೆಣಸಿನಕಾಯಿ ಗಿಡದಲ್ಲಿ ಒಂದೂ ಕಾಯಿ ಬಿಟ್ಟಿಲ್ಲ. ಅನ್ಯಾಯವಾದ ರೈತರಿಗೆ ಪರಿಹಾರ ಕೊಡಬೇಕು. ಇಲ್ಲವಾದರೆ ತೋಟಗಾರಿಕೆ, ತಹಸೀಲ್ದಾರ್ ಕಾರ್ಯಾಲಯ ಎದುರು ಅಹೋರಾತ್ರಿ ಧರಣಿ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಸಹಾಯಕ ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ತಾಂತ್ರಿಕ ಅಧಿಕಾರಿ ನಿಂಗಪ್ಪ ಕಾಕೋಳ, ಗುಡ್ಡಪ್ಪ ಎಂ., ಗಂಗಣ್ಣ ಎಲಿ, ಜಯಣ್ಣ ಮಲ್ಲಿಗಾರ, ಬಿ.ಎಂ. ಹಾರ್ಡಕರ, ಯಲ್ಲಪ್ಪ ಕಾಕೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net