ಕಳಪೆ ಬೀಜ ಕೊಟ್ಟು ರೈತರಿಗೆ ವಂಚನೆ

22Naregal2
Published on

ನರೇಗಲ್ಲ: ವ್ಯಕ್ತಿಯೊಬ್ಬ ಕಳಪೆ ಉಳ್ಳಾಗಡ್ಡಿ ಬೀಜಗಳನ್ನು ವಿತರಿಸಿ ಮೋಸ ಮಾಡಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಕೃಷಿ ಅಧಿಕಾರಿ ಹಾಗೂ ಪೊಲೀಸ್ ಠಾಣೆಗೆ ಸೋಮವಾರ ಮನವಿ ಸಲ್ಲಿಸಿದರು.

ನಿಡಗುಂದಿ ಗ್ರಾಮದ ರೈತ ಅಂದಪ್ಪ ಬಿಚ್ಚೂರ ಮಾತನಾಡಿ, ‘ನಿಡಗುಂದಿ ಗ್ರಾಮದ ತರಕಾರಿ ಸಂತೆಯಲ್ಲಿ ರಾಯಚೂರ ಜಿಲ್ಲೆ ಲಿಂಗಸೂಗುರ ತಾಲೂಕಿನ ಹುಳಿಕುಂಟೆ ಗ್ರಾಮದ ಮಂಜು ರಾಮಣ್ಣ ಭೀಮನಗೌಡ್ರ ಎಂಬಾತ ರೈತರಿಗೆ ನಂಬಿಕೆ ಹುಟ್ಟಿಸಿ ಕಳಪೆ ಗುಣಮಟ್ಟದ ಉಳ್ಳಾಗಡ್ಡಿ ಬೀಜವನ್ನು ಮಾರಾಟ ಮಾಡಿದ್ದಾನೆ. ರೈತರು ಈತನನ್ನು ನಂಬಿ ಸುಮಾರು 2 ಕ್ವಿಂಟಾಲ್ ಬೀಜ ಖರೀದಿಸಿದ್ದಾರೆ. ನಂತರ ಮನೆಯಲ್ಲಿ ಈ ಬೀಜಗಳನ್ನು ಪರೀಕ್ಷಿಸಿದಾಗ ಒಂದೇ ಒಂದು ಬೀಜವೂ ಮೂಳಕೆಯೊಡೆದಿಲ್ಲ. ರೈತರಿಗೆ ಸಾವಿರಾರು ರೂ.ಮೋಸ ಮಾಡಿದವನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಗದೀಶ ಹಾದಿಮನಿ ಮಾತನಾಡಿ, ಕಳಪೆ ಬೀಜ ಖರೀದಿ ಮಾಡದಂತೆ ಕೃಷಿ ಇಲಾಖೆಯಿಂದ ರೈತರಿಗೆ ಈಗಾಗಲೇ ಸಾಕಷ್ಟು ಬಾರಿ ಜಾಗೃತಿ ಮೂಡಿಸಲಾಗಿದೆ. ಉಳ್ಳಾಗಡ್ಡಿ ಬೆಳೆಯು ಕೃಷಿ ಇಲಾಖೆಗೆ ಸಂಬಂಧಿಸಿದ್ದಲ್ಲ ಮನವಿಯನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ ಎಂದರು.

ರೈತರಾದ ನಿಂಗನಗೌಡ ಲಕ್ಕನಗೌಡ್ರ, ವಿ.ಎಸ್. ಪೂಜಾರ, ಬಸಪ್ಪ ಅಣಗೌಡ್ರ, ಹೊನ್ನಪ್ಪ ಕಂಬಳಿ, ಶರಣಪ್ಪ ಅಬ್ಬಿಗೇರಿ, ಬಸವರಾಜ ಹಿರೇಮನಿ, ವೀರಪ್ಪ ಕಂಬಳಿ, ಬಸಪ್ಪ ಪರಮಣ್ಣವರ, ಹನಮಪ್ಪ ಉಮಚಗಿ, ಬಿ.ಜಿ. ಅರಮನಿ, ಬಸವರಾಜ ಅರಮನಿ, ವಿ.ಬಿ. ಪಾಟೀಲ ಇತರರು ಇದ್ದರು.

ಬೀಜ ಖರೀದಿಸುವಾಗ ಗಮನಿಸಬೇಕಾದ ಅಂಶಗಳು

* ಬಿಚ್ಚಿದ, ಬಿಡಿ ಬೀಜಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು.

* ರೈತ ಸಂಪರ್ಕ ಕೇಂದ್ರ, ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಬೇಕು.

* ಬೀಜ ಖರೀದಿಸುವ ಮುನ್ನ ಬೀಜದ ಚೀಲ, ಪ್ಯಾಕ್, ಡಬ್ಬಿಯ ಮೇಲೆ ಅಥವಾ ಚೀಲವನ್ನು ಯಂತ್ರದಿಂದ ಹೊಲಿದಿರಬೇಕು. * ಬಿತ್ತನೆ ಬೀಜದ ವಿಧ ಮತ್ತು ತಳಿಯ ಮಾಹಿತಿ, ಉತ್ಪಾದಕರ ವಿವರ, ಚೀಲದ ತೂಕ ಸರಿಯಾಗಿದೆಯೇ, ಕನಿಷ್ಠ ಮೊಳಕೆ ಪ್ರಮಾಣ ಮತ್ತು ಶುದ್ದತೆಯ ಪ್ರಮಾಣ, ಲಾಟ್ ಸಂಖ್ಯೆ, ಬಿತ್ತನೆ ಬೀಜದ ಚೀಲ, ಅವಧಿ ಮೀರುವ ದಿನಾಂಕ ಇತ್ಯಾದಿ ಮಾಹಿತಿ ತಿಳಿದುಕೊಳ್ಳಬೇಕು.

* ಕಡ್ಡಾಯವಾಗಿ ಬೀಜ ಖರೀದಿಸಿದ ಬಗ್ಗೆ ರಶೀದಿ ಪಡೆಯಬೇಕು. ಬೆಳೆ ಕಟಾವು ಆಗುವವರೆಗೆ ಅದನ್ನು ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net