

ಕಳಸ: ಕುದುರೆಮುಖದಲ್ಲಿ ರಸ್ತೆ ಕಳಪೆ ಡಾಂಬರೀಕರಣ ನಡೆಸುತ್ತಿರುವುದನ್ನು ಪ್ರಶ್ನಿಸಿ ಮರು ಡಾಂಬರೀಕರಣ ಮಾಡಿಸಲಾಗಿದೆ.
ಕುದುರೆಮುಖ ರಸ್ತೆಯಲ್ಲಿ ಮೂರು ವರ್ಷದ ಹಿಂದೆ ಕಾಮಗಾರಿ ಪ್ರಾರಂಭವಾಗಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದರ ವಿರುದ್ಧ ಕಳೆದ ಕೆಲ ದಿನಗಳ ಹಿಂದೆ ಕುದುರೆಮುಖದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಿಡಬ್ಲುೃಡಿ ಇಂಜಿನಿಯರ್ ಅವರನ್ನು ಪ್ರಶ್ನಿಸಲಾಗಿತ್ತು. ಆ ಸಂದರ್ಭದಲ್ಲಿ ಹದಿನೈದು ದಿನದಲ್ಲಿ ಕಾಮಗಾರಿ ಪ್ರಾರಂಭಮಾಡುತ್ತೇವೆ ಎಂದು ಇಂಜಿನಿಯರ್ ಸತೀಶ್ ಮಾತುಕೊಟ್ಟಿದ್ದರು. ಅದರಂತೆ ಕೆಲ ದಿನಗಳಿಂದ ಮತ್ತೆ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ಭಾನುವಾರ ಡಾಂಬರು ಹಾಕುವ ಯಂತ್ರಗಳು ಹಾಳಾಗಿದ್ದವು. ಆಗಲೇ 5 ಲೋಡ್ ಡಾಂಬರು ಮಿಶ್ರಣ ತಂದಿಡಲಾಗಿತ್ತು. ಇದೇ ಡಾಂಬರನ್ನು ಸೋಮವಾರ ರಸ್ತೆಗೆ ಹಾಕುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಡಾಂಬರು ಮಿಶ್ರಣ ತಾಪಮಾನ ಕಳೆದುಕೊಂಡು ಸಂಪೂರ್ಣವಾಗಿ ಗಟ್ಟಿಯಾಗಿತ್ತು. ಕೂಡಲೇ ಸ್ಥಳೀಯರು ಕಾಮಗಾರಿ ಗುಣಮಟ್ಟದ ಬಗ್ಗೆ ಚಕಾರವೆತ್ತಿ ಕಾಮಗಾರಿ ನಿಲ್ಲಿಸಿ ಮತ್ತು ಹಾಕಿರುವ ಡಾಂಬರನ್ನು ತೆಗೆದು ಮರು ಡಾಂಬರೀಕಣ ಮಾಡುವಂತೆ ಪಟ್ಟು ಹಿಡಿದರು. ಪಿಡಬ್ಲುೃಡಿ ಇಂಜಿನಿಯರುಗಳಿಗೆ ಮಾಹಿತಿಯನ್ನೂ ನೀಡಿದರು. ಕೂಡಲೇ ಸ್ಥಳಕ್ಕೆ ಪಿಡಬ್ಲುೃಡಿ ಇಂಜಿನಿಯರು ಆಗಮಿಸಿದರು. ಸ್ಥಳೀಯರ ಒತ್ತಡಕ್ಕೆ ಮಣಿದು ಕಾಮಗಾರಿ ಸ್ಥಗಿತಗೊಳಿಸಲಾಯಿತು. ಮಂಗಳವಾರ ಇಂಜಿನಿಯರ್ ಸಮ್ಮ್ಮುಖದಲ್ಲಿ ಡಾಂಬರನ್ನು ಕಿತ್ತುತೆಗೆದು ಮರು ಡಾಂಬರೀಕರಣ ಮಾಡಲಾಯಿತು.
ಸ್ಥಳೀಯರಾದ ಮಂಜುನಾಥ್ ನೆಲ್ಲಿಬೀಡು, ದೀಕ್ಷಿತ್ ಆರೋಳ್ಳಿ, ಪ್ರಶಾಂತ್ ಬೆಟ್ಟಗೆರೆ, ನಾರಾಯಣ ಜಾಂಬ್ಲೆ, ಮಹೇಶ್ ಕಬ್ಬಂಚಿ, ಶಿಹಾದ್ ನೆಲ್ಲಿಬೀಡು ಇದ್ದರು.