ಕಳಪೆ ಟಾರ್ಪಾಲ್ ವಿತರಣೆ; ಹೊಸತನ್ನು ನೀಡುವುದಾಗಿ ಹೇಳಿ ತಿಂಗಳುಗಳೇ ಕಳೆದರೂ ಪರಿಹಾರ ಇಲ್ಲ

14ank news and photos 05(1)
?????????????????????????????????????????????????????????????????????????????????????????????????????????????????????????????????
Published on

ಆನೇಕಲ್: ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳಿಗೆ ವಿತರಿಸಿರುವ ಟಾರ್ಪಾಲ್ ಕಳಪೆಯಾಗಿದೆ ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ.

ಸಮಂದೂರು ಗ್ರಾಮದ ರೈತ ಮುನಿಸ್ವಾಮಿ ಕೃಷಿ ಇಲಾಖೆಯಿಂದ ಟಾರ್ಪಾಲ್ ಪಡೆದಿದ್ದು, ಅದನ್ನು ಕೃಷಿ ಹೊಂಡಕ್ಕೆ ಹಾಕಿದ ಒಂದು ವಾರಕ್ಕೇ ಹರಿದು ಹೋಗಿದ್ದು, ಟಾರ್ಪಾಲ್‌ನಲ್ಲಿ ಸಣ್ಣಸಣ್ಣ ತೂತು ಬಿದ್ದು ಶೇಖರಣೆಗೊಂಡ ಮಳೆ ನೀರು ಇಂಗುತ್ತಿದೆ.

ರೈತರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ನಾನಾ ಯೋಜನೆಗಳ ಮೂಲಕ ವಿತರಿಸುವ ಸಾಮಗ್ರಿಗಳು ಕಳಪೆಯಾಗಿರುವುದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಕೃಷಿ ಹೊಂಡಗಳನ್ನು ತೆಗೆಸಲು ಮುಂದಾದ ಸರ್ಕಾರ ಸಹಾಯಧನ ನೀಡಿತ್ತು. ಈ ಯೋಜನೆಯಿಂದ ತಾಲೂಕಿನಲ್ಲಿ ನೂರಾರು ರೈತರಿಗೆ ಅನುಕೂಲವಾಗುವ ಭರವಸೆ ಇತ್ತು. ಆದರೆ ಕಳಪೆ ಟಾರ್ಪಾಲ್ ವಿತರಣೆಯಿಂದ ಶೇಖರಣೆಗೊಂಡ ಮಳೆ ನೀರು ಹೊಂಡಗಳಲ್ಲಿ ನಿಲ್ಲುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ ಬಳಿಕ ನೆಪಮಾತ್ರಕ್ಕೆ ಪರಿಶೀಲಿಸಿ ಹೋದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಪತ್ರ ಬರೆದು ಹೊಸ ಟಾರ್ಪಾಲ್ ಕೊಡಿಸುವುದಾಗಿ ಹೇಳಿದ್ದರು. ತಿಂಗಳುಗಳೇ ಕಳೆದರೂ ಯಾವುದೇ ಪರಿಹಾರ ಬಂದಿಲ್ಲ.

ವ್ಯವಸಾಯವನ್ನೇ ಜೀವನಾಧಾರವಾಗಿ ನಂಬಿಕೊಂಡಿರುವ ರೈತರಿಗೆ ಈ ರೀತಿಯ ಕಳಪೆ ಸಾಮಗ್ರಿಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ನೀಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಗಮನಹರಿಸಬೇಕು. ಮುನಿಸ್ವಾಮಿ, ರೈತ ಕರೊನಾ ಇರೋದರಿಂದ ತರಕಾರಿಗಳಿಗೆ ಬೆಲೆ ಇಲ್ಲ. ಹೂವಿನ ಬೆಲೆ ಸಂಪೂರ್ಣವಾಗಿ ಕುಸಿದಿದೆ. ಅಧಿಕಾರಿಗಳು ಸಹಾಯ ಮಾಡಬೇಕು. ಆದರೆ ಹಲವು ಬಾರಿ ಕಚೇರಿಗೆ ತೆರಳಿ ಸಮಸ್ಯೆ ಹೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಅರುಣ್ ಕುಮಾರ್, ರೈತ ಈಗಾಗಲೇ ಟಾರ್ಪಾಲ್ ಕಿತ್ತು ಹೋಗಿರುವ ಬಗ್ಗೆ ರೈತರು ಅರ್ಜಿ ನೀಡಿದ್ದಾರೆ. ಅರ್ಜಿಯನ್ನು ಈಗಾಗಲೇ ಮೇಲಧಿಕಾರಿಗಳಿಗೆ ಸಲ್ಲಿಸಿದ್ದು, ಅವರು ಮುಂದಿನ ಕ್ರಮಕೈಗೊಂಡು ರೈತರಿಗೆ ನ್ಯಾಯ ಒದಗಿಸುತ್ತಾರೆ. ಶೋಭಾ, ಕೃಷಿ ಇಲಾಖೆ ವ್ಯವಸ್ಥಾಪಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net