

ತಿಪಟೂರು : ನಗರಸಭೆಯಿಂದ ನೀಡಲಾಗುತ್ತಿರುವ ಬೆಳಗಿನ ಉಪಾಹಾರವನ್ನು ಪೌರ ಕಾರ್ಮಿಕರು ಕಳಪೆಯಾಗಿದ್ದ ಕಾರಣ ತಿರಸ್ಕರಿಸಿದ್ದಾರೆ.
ಉಪಾಹಾರ ಯೋಜನೆ ಪ್ರಾರಂಭವಾದಾಗ ಕೆಲ ದಿನ ಶುಚಿ-ರುಚಿಯಾಗಿ ಪೂರೈಸಿದ್ದು ಬಿಟ್ಟರೆ, ನಂತರದ ದಿನಗಳಲ್ಲಿ ಕಳಪೆಯಾಗಿದ್ದು, ಈ ತಿಂಡಿ ತಿಂದ ನಂತರ ನಮಗೆ ಹೊಟ್ಟೆ ನೋವು, ಭೇದಿ ಕಾಣಿಸಿಕೊಂಡಿದೆ ಎಂದು ಆರೋಪಿಸಿದರು.
ಗುಣಮಟ್ಟ ಸುಧಾರಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ವಹಿಸುತ್ತಿಲ್ಲ. ಆದ್ದರಿಂದ ತಿಂಡಿಯನ್ನು ನಿಲ್ಲಿಸಿಬಿಡಿ ಎಂದು ಬುಧವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೆವು, ಆದಾಗ್ಯೂ ಗುರುವಾರ ಬೆಳಗ್ಗೆ ಎಂದಿನಂತೆ ಸರಬರಾಜು ಆಗಿದ್ದು, ತಿಂಡಿ ಪಡೆಯಲು ನಿರಾಕರಿಸಿ ವಾಪಸ್ ಕಳಿಸಿದ್ದೇವೆ ಎಂದು ಪೌರಕಾರ್ಮಿಕರು ತಿಳಿಸಿದರು.
ನಗರಸಭೆಯ ಪೌರ ಕಾರ್ಮಿಕರು ಬೆಳಗಿನ ಜಾವದಿಂದಲೇ ಕರ್ತವ್ಯಕ್ಕೆ ಹಾಜರಾಗುವ ಕಾರಣ ಬೆಳಗಿನ ತಿಂಡಿ ವೆಚ್ಚವೆಂದು ಮಾಸಿಕ 600-700 ರೂ.ಗಳನ್ನು ಅವರ ಸಂಬಳದ ಜತೆ ಪ್ರತ್ಯೇಕವಾಗಿ ಕೊಡಲಾಗುತ್ತಿತ್ತು. ನಂತರದ ದಿನಗಳಲ್ಲಿ ಯೋಜನೆಯಲ್ಲಿ ಮಾರ್ಪಾಡು ಮಾಡಿದ ಪೌರಾಡಳಿತ ನಿರ್ದೇಶನಾಲಯ, ಹಣಕ್ಕೆ ಬದಲು ತಿಂಡಿ ನೀಡುವ ಯೋಜನೆ ಜಾರಿಗೆ ತಂದು 2020ರ ಸೆ.1ರಿಂದ ವಾರ್ಷಿಕ 8.27 ಲಕ್ಷ ರೂ.ಗಳ ಗುತ್ತಿಗೆ ಆಧಾರದಲ್ಲಿ ಅಂದಾಜು 125 ಪೌರ ಕಾರ್ಮಿಕರಿಗೆ ತಲಾ 350 ಗ್ರಾಂ ತೂಕದ ಗುಣಮಟ್ಟದ ಬೆಳಗಿನ ತಿಂಡಿ ಸರಬರಾಜು ಮಾಡುವ ಗುತ್ತಿಗೆ ನೀಡಲಾಗಿದೆ.
ಕರೊನಾ ಕಾಣಿಸಿಕೊಂಡ ನಂತರ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ತಿಂಡಿಯ ಜತೆಗೆ ಪ್ರತಿ ದಿನ ಬೇಯಿಸಿದ ಕೋಳಿ ಮೊಟ್ಟೆ ಕೊಡಲಾಗುತ್ತಿದೆ. ಅಂದರೆ ಸರಾಸರಿ ಒಂದು ತಿಂಡಿಗೆ 18.87 ರೂಪಾಯಿ ಕೊಟ್ಟಂತಾಗುತ್ತದೆ. ಈ ಹಣ ಕಡಿಮೆ ಎಂಬ ಕಾರಣಕ್ಕೆ ನಗರಸಭೆಯ 2021-22ರ ಆಯವ್ಯಯದಲ್ಲಿ ಪೌರ ಕಾರ್ಮಿಕರ ಕಲ್ಯಾಣಕ್ಕೆಂದು 7 ಲಕ್ಷ ರೂಪಾಯಿ ಮೀಸಲಿಟ್ಟಿದ್ದು, ಪೌರಾಡಳಿತ ನಿರ್ದೇಶನಾಲಯದ ಒಪ್ಪಿಗೆ ಪಡೆದು ತಿಂಡಿ ದರವನ್ನು 21-22ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ.
ಇಂದು ವಾಪಸ್ ಬಂದ ತಿಂಡಿಯನ್ನು ನಾನೇ ಸ್ವತಃ ತಿಂದು ಪರೀಕ್ಷಿಸಿದ್ದೇನೆ. ತಿಂಡಿ ರುಚಿಯಾಗಿದೆ. ಆದಾಗ್ಯೂ ಇಂದು ವಾಪಸ್ ಕಳುಹಿಸಿದ ತಿಂಡಿ ಪೊಟ್ಟಣಗಳ ಗುಣಮಟ್ಟ ಮತ್ತು ತೂಕ ಖಾತ್ರಿಪಡಿಸಲು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ಕೆಲವರನ್ನು ಬಿಟ್ಟರೆ ಎಲ್ಲರೂ ತಿಂಡಿ ನಿರಾಕರಿಸಿಲ್ಲ. ಪಿ.ಜೆ.ರಾಮಮೋಹನ್, ಅಧ್ಯಕ್ಷ, ನಗರಸಭೆ