ಕಳಂಕಿತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ

SUDHAKAR
Published on

ಕೊಪ್ಪಳ: ರಾಜ್ಯದಲ್ಲಿ ಹಲವು ಬಿಜೆಪಿಗರು ಕಾಂಗ್ರೆಸ್ ಸೇರಲಿದ್ದಾರೆಂಬ ವದಂತಿ ಇದೆ. ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಹೀಗಾಗಿ ಅವರನ್ನು ನಮ್ಮ ನಾಯಕರು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಅನುಮಾನವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಹೇಳಿದರು.


ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಥವಾ ಬೇಡವೆಂಬ ಬಗ್ಗೆ ನಿರ್ಧರಿಸಲು ಹೈ ಕಮಾಂಡ್ ಇದೆ. ಸದ್ಯಕ್ಕೆ ಯಾವುದೇ ಬೆಳವಣಿಗೆಗಳಾಗಿಲ್ಲವೆಂದು ಸೋಮವಾರ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಹೊಸ ಎಂಟು ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ವಿಚಾರ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಈಗಾಗಲೇ ಇರುವ ಹಳೇ ವಿವಿಗಳೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ವಿಶ್ವ ವಿದ್ಯಾಲಯ ರಚನೆಗೆ ಸಾಕಷ್ಟು ತಯಾರಿ ಬೇಕು. ಯಾವುದೇ ತಯಾರಿ ಇಲ್ಲದೇ ಹಿಂದಿನ ಸರ್ಕಾರ ಹೊಸ ವಿವಿ ಘೋಷಿಸಿದೆ. ಅನುದಾನ ನೀಡಿಲ್ಲ. ಹೀಗಾಗಿ ವಿವಿಗಳ ಸ್ಥಿತಿ ಏನಿದೆ ಎಂಬ ಬಗ್ಗೆ ತಿಳಿಯಲು ಸಿಎಂ ಅಧ್ಯಕ್ಷತೆಯಲ್ಲಿ ಎಲ್ಲ ವಿವಿಗಳ ಕುಲಪತಿಗಳೊಂದಿಗೆ ಸಭೆ ನಡೆಸಿ ವರದಿ ಪಡೆದಿದ್ದೇವೆ. ಎಲ್ಲವನ್ನು ತುಲನೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.


ಎನ್‌ಇಪಿಯನ್ನು ತರಾತುರಿಯಲ್ಲಿ ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿವೆ. ಈ ಬಗ್ಗೆ ಅಧ್ಯಯಕ್ಕೆ ಸಮಿತಿ ರಚಿಸಲಾಗಿದೆ. ವರದಿ ಪಡೆದು ಸ್ಥಳೀಯತೆಗೆ ತಕ್ಕಂತೆ ಶಿಕ್ಷಣ ನೀತಿ ರೂಪಿಸಲಾಗುವುದು. ಬಿಜೆಪಿಗರು ಕೋಮು ಭಾವನೆ ಕೆರಳಿಸುವಂಥ ಕೆಲ ಅಂಶಗಳನ್ನು ಸೇರಿಸಿದ್ದಾರೆ. ಅದನ್ನು ತೆಗೆಯಬೇಕಿದೆ. 2021ರಲ್ಲಿನ ಉಪನ್ಯಾಸಕರ ನೇಮಕಾತಿ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net