

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇಎಮ್ಮಿಗನೂರು ಗ್ರಾಮದ ಕಲ್ಲೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ ಮಹಾರಥೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಸ್ವಾಮಿಯ ರಥವನ್ನು ಎಳೆಯುವ ಕ್ಷಣಕ್ಕಾಗಿ ಅನೇಕ ಭಕ್ತರು ಕಾತರದಿಂದ ಕಾಯುತ್ತಿದ್ದರು. ಚಾಲನೆ ದೊರೆಯುತ್ತಿದ್ದ ಕಲ್ಲೇಶ್ವರ ಸ್ವಾಮಿ ಕೀ ಜೈ, ಹರಹರ ಮಹಾದೇವ್, ಆಂಜನೇಯ ಸ್ವಾಮಿ ಕೀ ಜೈ ಎಂದು ಜಯಘೋಷ ಮೊಳಗಿಸಿದರು. ಈ ವೇಳೆ ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.
ರಥಕ್ಕೆ ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಸ್ವಾಮಿಗೆ ಮುಂಜಾನೆ ಮಹಾರುದ್ರಾಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು.
ರಥೋತ್ಸವಕ್ಕೂ ಮುನ್ನ ದೇಗುಲದಿಂದ ಸ್ವಾಮಿಯ ಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಕರೆತಂದು ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದ ಬಳಿ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.