ಕಲ್ಲೇಶ್ವರ ದೇಗುಲ ಅಭಿವೃದ್ಧಿ ಮರೀಚಿಕೆ

feb 26 kottur 02
Published on

ಕೊಟ್ಟೂರು: ಬೆಣ್ಣಿಕಲ್ಲು ಗ್ರಾಮದ ಪುರಾತನ ಕಲ್ಲೇಶ್ವರ ದೇವಾಲಯ ಜೀಣೋದ್ಧಾರವಾಗದೆ ನಿರ್ಲಕ್ಷೃಕ್ಕೊಳಗಾಗಿದೆ.

12ನೇ ಶತಮಾನದಲ್ಲಿ ಹೊಯ್ಸಳ ದೊರೆ 2ನೇ ವೀರನರಸಿಂಹನ ದಂಡನಾಯಕ ಅಮಿತಯ್ಯ 1226ರಲ್ಲಿ ಕಲ್ಲೇಶ್ವರ, ಪದ್ಮಲ್ಲೇಶ್ವರ, ಬಲ್ಲಾಳೇಶ್ವರ, ಮದಮಿತ್ರೇಶ್ವರ, ಪಂಚಲಿಂಗೇಶ್ವರ ದೇವಾಲಯ ನಿರ್ಮಿಸಿದ್ದರು. ಶಿವರಾತ್ರಿ ದಿನ ಸೂರ್ಯನ ಕಿರಣ ಮದಮಿತ್ರೇಶ್ವರ ಸ್ಪರ್ಶಿಸುತ್ತದೆ. ವೈಷ್ಣವ, ಶೈವ ಧರ್ಮಗಳ ಸಮ್ಮಿಲನಕ್ಕೆ ಸಾಕ್ಷಿಯಾಗಿ ಲಕ್ಷ್ಮಿನಾರಾಯಣ ಸ್ವಾಮಿ, ಯೋಗನರಸಿಂಹ ಸ್ವಾಮಿಯ ಸುಂದರ ಮೂರ್ತಿಗಳಿವೆ. ಶಿಲ್ಪವೈಭವ ನೋಡುಗರನ್ನು ಸೆಳೆಯುತ್ತವೆ.

ದೇವಾಲಯವನ್ನು ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಪ್ರವೇಶ ಮಾಡಬಹುದು. ಸಪ್ತಮಾತೃಕೆಯರು ಸಾಲು ಶಿಲ್ಪಗಳು, ಗಣೇಶ ವಿಗ್ರಹ, ವೀರಗಲ್ಲು, ಸತಿಕಲ್ಲುಗಳು, ಶಾಸನಗಳು ದೇವಾಲಯದ ಭವ್ಯ ಇತಿಹಾಸ ಸಾರುತ್ತವೆ. ಆದರೆ, ದೇವಾಲಯ ಒಳಗೆ ಕಾಲಿಟ್ಟರೆ ಬಾವಲಿಗಳು ಸ್ವಾಗತಿಸುತ್ತವೆ. ಮಳೆ ಬಂದರೆ ಸೋರುತ್ತದೆ. ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ, ಶಿಲ್ಪಕೆತ್ತನೆ ಕಾಣಿಸುವುದಿಲ್ಲ. ಈ ದೇವಸ್ಥಾನ ಧಾರ್ಮಿಕ-ದತ್ತಿ ಇಲಾಖೆಯ ಸಿ ಗ್ರೇಡ್‌ಗೆ ಒಳಪಟ್ಟಿದೆ.

ಬೆಣ್ಣಿಕಲ್ಲು ಗ್ರಾಮದ ಶ್ರೀ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಬಸವನಗೌಡ ಮತ್ತು 15 ಜನ ಯುವಕರ ತಂಡ ಕಳೆದ 5 ವರ್ಷಗಳಿಂದ ದೇವಾಲಯ ರಕ್ಷಣೆಗೆ ಪ್ರಯತ್ನ ನಡೆಸಿದೆ. ದೇವಾಲಯಕ್ಕೆ ಬೆಳಕಿನ ವ್ಯವಸ್ಥೆ ಮಾಡಿದೆ. ಪ್ರತಿ ಅಮವಾಸ್ಯೆಗೆ ಸಂಘದಿಂದ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರ ಸಹಕಾರದಿಂದ ಕೊಳವೆಬಾವಿ ಹಾಕಿಸಿದ್ದಾರೆ.

ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಇತ್ತೀಚಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net