

ಹುಣಸೂರು: ಮಹಾಶಿವರಾತ್ರಿ ಅಂಗವಾಗಿ ನಗರದ ವಿ.ಪಿ.ಬೋರೆ ಬಡಾವಣೆಯ ಶ್ರೀ ಕಲ್ಲುರ್ಟಿ ಪಾಷಾಣಮೂರ್ತಿ ದೇವಸ್ಥಾನದಲ್ಲಿ 5ನೇ ವರ್ಷದ ದೈವಗಳ ಜಾತ್ರಾ ಮಹೋತ್ಸವ ಮತ್ತು ದೈವಗಳ ಕೋಲ ಸಂಪನ್ನಗೊಂಡಿತು.
ಶನಿವಾರ ರಾತ್ರಿ 7.30ಕ್ಕೆ ಭಂಡಾರ ಆಗಮನದ ನಂತರ ಮಹಾಮಂಗಳಾರತಿ ನಡೆಯಿತು. ಬಳಿಕ ಅನ್ನಸಂತರ್ಪಣೆ ಮಾಡಲಾಯಿತು. 9.30ರ ವೇಳೆಗೆ ಕಲ್ಲುರ್ಟಿ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ನರ್ತನ ಸೇವೆ ಆರಂಭವಾಯಿತು. ಕಾಂತಾರ ಸಿನಿಮಾದ ಹಾಡುಗಳು ಒಳಗೊಂಡಂತೆ ದೈವಗಳ ನರ್ತನ ಭಕ್ತರನ್ನು ಮನತಣಿಸಿತು. ಮುಂಜಾನೆ 4.30ರವರೆಗೂ ದೈವಗಳ ನರ್ತನ ನಡೆಯಿತು. ಕೊಂಡ ಹಾಯ್ದ ನಂತರ ಬೆಳಗ್ಗೆ 5 ಗಂಟೆಗೆ ಭಂಡಾರ ನಿರ್ಗಮನವಾಯಿತು. ಬಳಿಕ ದೇವರಿಗೆ ಮಹಾಮಂಗಳಾರತಿ ಮಾಡುವ ಮೂಲಕ ಭೂತಕೋಲ ಕಾರ್ಯಕ್ರಮ ಸಂಪನ್ನಗೊಂಡಿತು. ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿ ಕೆಲಕಾಲ ದೈವಗಳ ನರ್ತನ ವೀಕ್ಷಿಸಿದರು.
ದೈವ ಆರಾಧಕ ರಾಮಕೃಷ್ಣ, ದೈವದರ್ಶಿಗಳಾದ ಎಸ್.ಪಿ.ಆನಂದಪೂಜಾರಿ, ಅರ್ಚಕರಾದ ಸೋಮವಾರಪೇಟೆ ಐಗೂರಿನ ಧರ್ಮಪ್ಪ, ಕೊಡಗಿನ ವಿವೇಕ್ ಪುಜಾರಿ, ದೈವ ಆರಾಧಕ ಮುದ್ದನಹಳ್ಳಿ ಅಳ್ಳೂರು ಗ್ರಾಮದ ಜೆ.ರಾಜುಸ್ವಾಮಿ, ದೈವನರ್ತಕರಾಗಿ ಸುಳ್ಯ ತಾಲೂಕಿನ ಬೊಳಿಯಮಜಲು ಗ್ರಾಮದ ಜಯರಾಮ ಮತ್ತವರ ಬಳಗ ಮುಂತಾದವರು ಹಾಜರಿದ್ದರು.