

ಹಾಸನ: ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಐವನ್ ಡಿಸೋಜ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಗಲಭೆ ಸೃಷ್ಟಿಸಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ಬೆಂಬಲಿತ ಗೊಂಡಾಗಳನ್ನು ಬಂಧಿಸಲು, ಇವರ ಬೆಂಬಲಕ್ಕೆ ನಿಂತಿರುವ ಶಕ್ತಿಗಳ ವಿರುದ್ಧ ಕಾನೂನು ರೀತಿ
ಕ್ರಮ ಕೈಗೂಳ್ಳಬೇಕು ಎಂದು ಒತ್ತಾಯಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮೌನ ಪ್ರತಿಭಟನೆ ನಡೆಸಿದರು.
ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಅಹಿಂದಾ ವರ್ಗಗಳ ನೇತಾರರು ಆದಂತಹ ಸಿದ್ದರಾಮಯ್ಯ ನವರ ಮೇಲೆ ಕೇಂದ್ರ ಸರ್ಕಾರದ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ಪಕ್ಷದವರು ನಡೆಸುತ್ತಿರುವ ಕುತಂತ್ರ ರಾಜಕಾರಣವನ್ನು ವಿರೋಧಿಸಿ ಆ.19 ರಂದು ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರು, ಅಲ್ಪ ಸಂಖ್ಯಾತರ ಮುಖಂಡರಾದಂತಹ ಐವಾನ್ ಡಿಸೋಜ ರವರು ಮಾಡಿದ ಭಾಷಣವನ್ನು ತಪ್ಪಾಗಿ ಕಲ್ಪನೆ ಮಾಡಿಕೊಂಡು ಅವರ ಮಾತುಗಳನ್ನು ತಿರುಚಿ ಅವರ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂದು ದೂರಿದರು.
ಅವರಿಗೆ ಮತ್ತು ಅವರ ಕುಟುಂಬದವರಿಗೆ ಮಾನಸಿಕವಾಗಿ ನೀಡುತ್ತಿರುವ ಹಿಂಸೆ, ಕಿರುಕುಳ ಹಾಗೂ ವ್ಯಕ್ತಿಯ ವಾಕ್ ಸ್ವಾತಂತ್ರೃವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳ ಕೃತ್ಯವನ್ನು ಸಮರ್ಥಿಸಿರುವ ಮಂಗಳೂರು ಬಿ.ಜೆ.ಪಿ. ನಾಯಕರುಗಳ ಮನುಷ್ಯತ್ವ ವಿರೋಧಿ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದುಷ್ಕರ್ಮಿಗಳ ಬಗ್ಗೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್, ನಗರ ಬ್ಲಾಕ್ ಅಧ್ಯಕ್ಷ ಅಬ್ದುಲ್ ಕಯ್ಯುಂ, ಕೆಪಿಸಿಸಿ ಸದ್ಯಸ ಸಲೀಂ ಕೊಲ್ಲಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷ ಮುಜಾಹೀದ್ ಪಾಷ, ಪ್ರಕಾಶ ಸಿದ್ದಯ್ಯನಗರ, ಹುಡಾ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್, ಹರೀಶ್, ಅಶು ಆಸೀಫ್, ಅಬ್ದುಲ್ ಮುಜಾಮೀಲ್, ಅಲಾವೀನ್, ಫಾದರ್ ಜೋಸೆಫ್,ಇಕ್ಬಾಲ್ ಷರೀಫ್, ರೆಹಮಾನ್ ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು