

ಮೈಸೂರು: ಕೆತ್ತನೆ ಮಾಡಿ ಮಾರಾಟಕ್ಕೆ ಇರಿಸಿದ್ದ ಎರಡು ಕಲ್ಲಿನ ಆನೆಗಳ ಕಲಾಕೃತಿ, ಒಂದು ಹೂ ಆಕೃತಿಯ ಕಲ್ಲಿನ ಕುಂದವನ್ನು ಕಳ್ಳತನ ಮಾಡುತ್ತಿದ್ದ ಆರು ಆರೋಪಿಗಳನ್ನು ಮೇಟಗಳ್ಳಿ ಠಾಣೆ ಪೊಲೀಸರು ಮಾಲು ಸಮೇತ ಸ್ಥಳದಲ್ಲಿಯೇ ಬಂಧಿಸಿದ್ದಾರೆ.
ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಹಳೇ ಕಸ್ತೂರಿ ನಿವಾಸ ಹೋಟೆಲ್ ಪಕ್ಕದಲ್ಲಿರುವ ಕಲ್ಲಿನ ವಿಗ್ರಹಗಳನ್ನು ತಯಾರಿಸುವ ಕಾರ್ಯಾಲಯದ ಮುಂಭಾಗದಲ್ಲಿ ಅಂದಾಜು ಎರಡು ಲಕ್ಷ ರೂ.ಮೌಲ್ಯದ ಕಲ್ಲಿನ ಎರಡು ಆನೆ ಹಾಗೂ ಹೂವಿನ ಕುಂದ ಕಲಾಕೃತಿಯನ್ನು ಇರಿಸಲಾಗಿತ್ತು.
ಆರು ಜನ ಆರೋಪಿಗಳು ಶುಕ್ರವಾರ ಮಧ್ಯರಾತ್ರಿ ಟಾಟಾ ಜೀಪ್ (ಕೆಎ-45, ಎ-0819) ನಲ್ಲಿ ಹಾಕುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಮೇಟಗಳ್ಳಿ ಠಾಣೆ ಸಿಬ್ಬಂದಿ ವಿಚಾರಿಸಿದಾಗ ಪರಾರಿಯಾಗಲು ಯತ್ನಿಸಿದರು. ಅನುಮಾನಗೊಂಡು ಆರು ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್‌ಪೆಕ್ಟರ್ ಆರ್.ದಿವಾಕರ್, ಪಿಎಸ್‌ಐಗಳಾದ ವಿ.ಆರ್.ಶಬರೀಶ್, ಆರ್.ಜೋತ್ಸ್ನಾರಾಜ್, ಎಎಸ್‌ಐ ಜೋಸೆಫ್ ನರ‌್ಹೋನ, ಪಾಪೇಗೌಡ, ಸಿಬ್ಬಂದಿ ಕೆ.ಎನ್.ಹರೀಶ್, ದಿವಾಕರ್, ಜಿ.ಎಸ್. ಮಾಣಿಕ್ಯ, ಅಭಿಜಿತ್ ಬಿ.ಎಸ್.ಪರಶುರಾಮ ರಾಠೋಡ್, ಕೆ.ಆದರ್ಶ, ನಾಗರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.