ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಮಾಗೇರಿ ಸಮೀಪದ ಕಲ್ಲಹಳ್ಳಿ ಗ್ರಾಮದ ಬಳಿ ರಕ್ತ ಹರಿದಿರುವ ಕಲೆ ಇದ್ದ ಕಾರು ಕಳೆದ ಶನಿವಾರ ಪತ್ತೆಯಾಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ವ್ಯಕ್ತಿಯೊಬ್ಬನ ಕೊಲೆಯ ರಹಸ್ಯ ಪತ್ತೆಯಾಗಿದೆ.
ಗೆಳೆಯನ ಕಾರು ಪಡೆದುಕೊಂಡು ಬಂದಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಕ್ಕೆಹೊಳೆ ಜಂಗ್ಲನ್‌ನ ನಿವಾಸಿ ಸಂಪತ್ ಅಲಿಯಾಸ್ ಶಂಭು ಎಂಬಾತನನ್ನು ಕೊಲೆ ಮಾಡಿ ಅದೇ ಕಾರಿನಲ್ಲಿ ತಂದು ಬಿಸಾಡಲಾಗಿದೆ.
ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಶವ ಪತ್ತೆಯಾಗಿದ್ದು, ಸಂಪತ್‌ನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು ಆತನ ಕಾರಿನಲ್ಲೇ ಶವ ತಂದು ಪಾತಕಿಗಳು ಬಿಸಾಡಿ ಹೋಗಿದ್ದಾರೆ.
ಕಳೆದ ಏಪ್ರಿಲ್ 9ರಂದು ಕೊಡಗು ಜಿಲ್ಲೆ ಕುಶಾಲನಗರದ ಸ್ನೇಹಿತನಿಂದ ಸಂಪತ್ ಪಡೆದುಕೊಂಡು ಬಂದಿದ್ದ ಕಾರು, ಏ.10ರಂದು ಕಲ್ಲಹಳ್ಳಿ ಗ್ರಾಮದ ಪತ್ತೆಯಾಗಿತ್ತು. ಶನಿವಾರ ಬೆಳಗ್ಗೆ ಗ್ರಾಮದ ಜನವಸತಿ ಪ್ರದೇಶದಲ್ಲಿ ಸಂದೇಹಾಸ್ಪದವಾಗಿ ಕಾರು ನಿಂತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಸಮೀಪದ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆತಂದ ಚಾಲಕನೊಬ್ಬ ಕಾರಿನಲ್ಲಿ ರಕ್ತದ ಕಲೆಗಳಿರುವ ಬಗ್ಗೆ ಗ್ರಾಮಸ್ಥರಿಗೆ ನಂತರ ಯಸಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ, ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ತೆರಳಿ ವಿವರವಾದ ಪರಿಶೀಲನೆ ನಡೆಸಿ, ಮಹಜರು ನಡೆಸಿತ್ತು.
ಪ್ರಾಥಮಿಕ ತನಿಖೆಯಿಂದ ಕಾರು ಕುಶಾಲನಗರದ ವ್ಯಾಪಾರಿ ಜಾನ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಇದನ್ನು ಸಂಪತ್ ಶನಿವಾರ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಅದಾದ ಬಳಿಕ ಸಂಪತ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಪೊಲೀಸರು ಸಂಪತ್ ಅವರ ಕೊನೆಯ ಕರೆಗಳ ವಿವರ ಸಂಗ್ರಹಿಸಿ, ಹಿಂದಿನ ಗಲಾಟೆಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದರು. ಆದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಈ ನಡುವೆ ಕುಶಾಲನಗರ ಠಾಣೆಯಲ್ಲಿ ಸಂಪತ್ ಕಾಣೆಯಾಗಿರುವ ಬಗ್ಗೆ ದೂರು ದಾಖಲು ದಾಖಲಾಗಿತ್ತು. ಇತ್ತ ಯಸಳೂರು ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಸತತ 4 ದಿನದ ಶೋಧ ಕಾರ್ಯದ ಬಳಿಕ ಸಂಪತ್ ಶವ ಪತ್ತೆಯಾಗಿದೆ. ಬೇರೆಡೆ ಕೊಲೆ ಮಾಡಿ ಮಲೆನಾಡು ಭಾಗಕ್ಕೆ ಶವ ತಂದು ಬಿಸಾಡಿ ಹೋಗಿದ್ದಾರೆ.
ಇದೀಗ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.