ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹ -ದಸಂಸ ಪ್ರತಿಭಟನೆ

DVG-Dalith-protest.jpg
Published on

ದಾವಣಗೆರೆ: ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಗುರುವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಹಿಂದು ಜಾಗರಣಾ ವೇದಿಕೆ ಕಾರ್ಯಕ್ರಮದಲ್ಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರಭಾಕರ್ ಭಟ್ ಅವರನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಲ್ಲಿ ಪೊಲೀಸ್ ಇಲಾಖೆ ಸಹ ವಿಫಲವಾಗಿದೆ. ಕಾಂತರಾಜ ಜಾತಿ ಗಣತಿ ಆಯೋಗದ ವರದಿಯನ್ನು ಅಂಗೀಕರಿಸುವಂತೆ ಮತ್ತು ನಗರದ ನೂತನ ಸರ್ಕಾರಿ ಬಸ್ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡುವಂತೆಯೂ ಒತ್ತಾಯಿಸಿದರು.

ಬೇತೂರು ಗ್ರಾಪಂ ವ್ಯಾಪ್ತಿಯ ಬಿ. ಚಿತ್ತಾನಹಳ್ಳಿ, ಬಿ. ಕಲಪನಹಳ್ಳಿ ಮತ್ತು ನಗರ ವ್ಯಾಪ್ತಿಯ ಯರಗುಂಟೆ ಗ್ರಾಮದ ಗುಡಿಸಲು ವಾಸಿಗಳಿಗೆ ನಿವೇಶನ ಒದಗಿಸಿ ಹಕ್ಕುಪತ್ರ ನೀಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಸೌಲಭ್ಯ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಂಚಾಲಕರಾದ ಕುಂದುವಾಡ ಮಂಜುನಾಥ್, ಕೆ. ವಿಜಯಲಕ್ಷ್ಮಿ, ಪ್ರದೀಪ್, ಮಹಾಂತೇಶ್ ಹಾಲುವರ್ತಿ, ಜಿಲ್ಲಾ ಖಜಾಂಚಿ ಆರ್. ಮಂಜುನಾಥ್, ಹನುಮಂತಪ್ಪ ಗುಮ್ಮನೂರು, ಕರಿಬಸಪ್ಪ, ಜಬೀನಾ ಖಾನಂ, ಖಾಲಿದ್ ಅಲಿ, ಪರಶುರಾಮ್ ಮೆಳ್ಳೇಕಟ್ಟೆ, ಹನುಮಂತಪ್ಪ ಅಣಜಿ, ಎಸ್.ಎಂ. ಶಿವಶಂಕರ್ ಮತ್ತು ಸಮಿತಿಯ ಮುಖಂಡರು ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net