ಕಲ್ಯಾಣದಿಂದ ಬೆಂಗಳೂರಿಗೆ ಜನಾಂದೋಲನ ಮಹಾಮೈತ್ರಿ ಜನಜಾಗೃತಿ ಜಾಥಾ ಶುರು

Capture2
Published on

ಬಸವಕಲ್ಯಾಣ: ಮೂರು ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಖರೀದಿಗೆ ಕಾನೂನಾತ್ಮಕ ಖಾತ್ರಿಗೆ ಒತ್ತಾಯಿಸಿ ಜನಾಂದೋಲನ ಮಹಾಮೈತ್ರಿ ಸಮಿತಿ ಕಲ್ಯಾಣದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಜನಜಾಗೃತಿ ಜಾಥಾಕ್ಕೆ ಅನುಭವ ಮಂಟಪದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಸಮಿತಿ ಸಂಚಾಲಕ ಎಸ್.ಆರ್. ಹಿರೇಮಠ ಮಾತನಾಡಿ, ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ರಾಜ್ಯ ಸರ್ಕಾರವೂ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಕೃಷಿ ಕಾಯಕಕ್ಕೆ ಮಹತ್ವ ನೀಡಿದ ಶರಣ ಭೂಮಿಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬೆಳಗಾವಿ ಅಧಿವೇಶನ ವೇಳೆಯೂ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಆದರೆ ಸ್ಪಂದಿಸಿಲ್ಲ. ದೆಹಲಿ ಮಾದರಿಯಲ್ಲಿ ಇಲ್ಲಿನ ರೈತರು ಸಹ ಬೀದಿಗಿಳಿದು ಹೋರಾಡುವ ಅಗತ್ಯವಿದೆ ಎಂದರು.

ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶ. ಕೃಷಿಕರ ಹಿತರಕ್ಷಣೆಗೆ ಸಕರ್ಾರ ಯೋಜನೆಗಳನ್ನು ರೂಪಿಸಬೇಕು. ರೈತರ ಹಿತಕ್ಕೆ ವಿರುದ್ಧವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಿಪಿಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ಸರ್ಕಾರಗಳು ಅಧಿಕಾರಕ್ಕೆ ಬಂದ ಬಳಿಕ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂಕಷ್ಟಕ್ಕೆ ತಳ್ಳುತ್ತವೆ. ರಾಜ್ಯದ ಎಲ್ಲ ಮಠಾಧೀಶರು ಹಾಗೂ ಬುದ್ಧಿಜೀವಿಗಳು ರೈತರ ಪರ ಧ್ವನಿ ಎತ್ತಬೇಕು. ಅಂದಾಗಲೇ ಜಾಥಾ ಉದ್ದೇಶ ಈಡೇರಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬರಗಾಲಪುರ ನಾಗೇಂದ್ರಪ್ಪ ಮಾತನಾಡಿ, ಕೆಲವರು ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕೃಷಿ ಸಂಸ್ಕೃತಿಗೆ ಧಕ್ಕೆ ತಂದರೆ ನಾಶವಾಗುತ್ತಾರೆ. ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.

ರೈತ ಸಂಘದ ಗೌರವಾಧ್ಯಕ್ಷ ಚಾಮರಾಸ ಮಾಲಿಪಾಟೀಲ್, ಅಂಬಿಕಾ ಮಾತನಾಡಿದರು. ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಖಾಜಾ ಅಸ್ಲಾಂ ಅಹ್ಮದ್, ಶರಣಪ್ಪ ಉತಬಾಲ, ಬಿ.ಕರುಣಾಕರನ್, ರವಿಕಿರಣ ಕುಂಚ ಇತರರಿದ್ದರು. ನಂತರ ಕೆ.ನೀಲಾ ಹಾಗೂ ಹಿರೇಮಠ ಜಾಥಾಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net