

ಬಸವಕಲ್ಯಾಣ: ನಗರದಲ್ಲಿ ೨೦೨೫ರಲ್ಲಿ ಒಂಬತ್ತು ದಿನದ ಶರನ್ನವರಾತ್ರಿ ದಸರಾ ದರ್ಬಾರ್ ಯಶಸ್ವಿ ಮತ್ತು ವೈಭವಪೂರ್ಣ ನಡೆಯುವ ಜತೆಗೆ ಸಮಾಜಕ್ಕೆ ಆದರ್ಶ ಸಂದೇಶ ಸಾರಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಇದುವರೆಗೆ ೩೩ ದಸರಾ ದರ್ಬಾರ್ ನಡೆದಿವೆ. ಬಸವಾದಿ ಶರಣರು ನಾಡಿನ ಅಧ್ಯಾತ್ಮ ಲೋಕಕ್ಕೆ ಆದರ್ಶ ಬೆಳಕು ಕೊಟ್ಟ ಐತಿಹಾಸಿಕ ನಗರ ಕಲ್ಯಾಣದಲ್ಲಿ ೩೪ನೇ ದಸರಾ ದರ್ಬಾರ್ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ ಎಂದರು.
ಜಮಖಂಡಿ ಮತ್ತು ಬಳ್ಳಾರಿಯಲ್ಲಿ ೩೪ನೇ ದಸರಾ ದರ್ಬಾರ್‌ಗೆ ಭಕ್ತರು ಸಮಯ ಕೇಳಿದ್ದರು. ಆದರೆ ನಿಯೋಗದೊಂದಿಗೆ ಆಗಮಿಸಿ ಕಲ್ಯಾಣದಲ್ಲಿ ನಡೆಸುವಂತೆ ಶಾಸಕ ಶರಣು ಸಲಗರ ಮಾಡಿದ ಕೋರಿಕೆಯನ್ನು ಸಮ್ಮತಿ ಸೂಚಿಸಲಾಗಿದೆ. ಹೀಗಾಗಿ ಕಲ್ಯಾಣದಲ್ಲಿ ದಸರಾ ದರ್ಬಾರ್ ಯಶಸ್ಸಿಗಾಗಿ ಎಲ್ಲರೂ ಕೆಲಸ ಮಾಡುವ ಮೂಲಕ ಐತಿಹಾಸಿಕ ಸಮಾರಂಭವನ್ನಾಗಿಸುವಲ್ಲಿ ಸಂಶಯವಿಲ್ಲ ಎಂದು ಹೇಳಿದರು.
೩೪ನೇ ದಸರಾ ದರ್ಬಾರ್ ನಿಮಿತ್ತ ರಚಿಸಿದ ಸ್ವಾಗತ ಸಮಿತಿಯಲ್ಲಿ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಗೌರವಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷ ಮತ್ತು ಶಾಸಕ ಶರಣು ಸಲಗರ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುವರು. ಮುಂಬರುವ ದಿನಗಳಲ್ಲಿ ಹಾರಕೂಡ ಶ್ರೀ ಮತ್ತು ಶಾಸಕರು ಸೇರಿ ಸಮಿತಿ ಮತ್ತು ಉಪ ಸಮಿತಿ ಪದಾಧಿಕಾರಿಗಳ ನೇಮಕ ಮಾಡಲಿದ್ದಾರೆ ಎಂದರು.
ನೇತೃತ್ವ ವಹಿಸಿದ್ದ ಹಾರಕೂಡ ಹಿರೇಮಠ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಮಾತನಾಡಿ, ರಂಭಾಪುರಿ ಜಗದ್ಗುರುಗಳು ಬಸವಕಲ್ಯಾಣದಲ್ಲಿ ೩೪ನೇ ದಸರಾ ದರ್ಬಾರ್ ಆಯೋಜಿಸಲು ಒಪ್ಪಿಗೆ ನೀಡಿದ್ದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಹಿರನಾಗಾಂವನ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ಭಕ್ತರು ನನಗೆ ನೀಡಿದ ದೇಣಿಗೆಯಲ್ಲಿ ಕಲ್ಯಾಣದಲ್ಲಿ ನಡೆಯುವ ೩೪ನೇ ದಸರಾ ದರ್ಬಾರ್‌ಗೆ ೨.೫೧ ಲಕ್ಷ ರೂ. ನೀಡುವುದಾಗಿ ತಿಳಿಸಿದರು.
ತ್ರಿಪುರಾಂತದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿ, ೩೪ನೇ ದಸರಾ ದರ್ಬಾರ್ ಯಶಸ್ಸಿಗಾಗಿ ಜಗದ್ಗುರುಗಳ ಅಪ್ಪಣೆಯಂತೆ ಕೆಲಸ ಮಾಡುವೆ ಎಂದರು.
ಶಾಸಕ ಶರಣು ಸಲಗರ ಮಾತನಾಡಿದರು. ಪ್ರಮುಖರಾದ ಶರಣಪ್ಪ ಬಿರಾದಾರ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ರಾಜಕುಮಾರ ಸಿರಗಾಪುರ, ಪ್ರಮುಖರಾದ ಸುನೀಲ ಪಾಟೀಲ್, ಮಲ್ಲಯ್ಯ ಹಿರೇಮಠ, ಸಿದ್ರಾಮಪ್ಪ ಗುದಗೆ, ಚಂದ್ರಶೇಖರ ಪಾಟೀಲ್, ಮಲ್ಲಿನಾಥ ಹಿರೇಮಠ ಹಾರಕೂಡ, ಚಂದ್ರಶೇಖರ ಪಾಟೀಲ್, ಸೋಮಸೇಖರ ವಸ್ತ್ರದ, ಶ್ರೀಕಾಂತ ಬಡದಾಳೆ, ಮೇಘರಾಜ ನಾಗರಾಳೆ, ವೀರಣ್ಣ ಶೀಲವಂತ, ಎಂ.ಕೆ. ನಂದಿ, ಎ.ಜಿ. ಪಾಟೀಲ್, ಸುಭಾಷ ಇತರರಿದ್ದರು. ಶಿಕ್ಷಕ ರಮೇಶ ರಾಜೋಳೆ ನಿರೂಪಣೆ ಮಾಡಿದರು.
ಇತಿಹಾಸ ನೋಡಿದಾಗ ರಂಭಾಪುರಿ ಜಗದ್ಗುರುಗಳ ಪೀಠ ಅತ್ಯಂತ ಪ್ರಾಚೀನ ಪರಂಪರೆಯದ್ದು. ಐತಿಹಾಸಿಕ ನಗರ ಬಸವಕಲ್ಯಾಣದಲ್ಲಿ ರಂಭಾಪುರಿ ಜಗದ್ಗುರುಗಳ ೩೪ನೇ ದಸರಾ ದರ್ಬಾರ್ ಯಶಸ್ವಿಯಾಗಿ ಆಚರಿಸೋಣ. ೨೦೨೫ರ ಸಮಾರಂಭದಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದಿಂದ ಐದು ದಿನ ದಾಸೋಹ ವ್ಯವಸ್ಥೆ ಮಾಡಲಾಗುವುದು.
|ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹಾರಕೂಡ ಸಂಸ್ಥಾನ ಹಿರೇಮಠ
ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಘೋಷವಾಕ್ಯದೊಂದಿಗೆ ನಾಡಿನಾದ್ಯಂತ ಸಮಾಜಕ್ಕೆ ಆದರ್ಶ ಸಂದೇಶ ನೀಡುತ್ತಿರುವ ರಂಭಾಪುರಿ ಜಗದ್ಗುರುಗಳ ೩೪ನೇ ದಸರಾ ದರ್ಬಾರ್ ಬಸವಕಲ್ಯಾಣದಲ್ಲಿ ಐತಿಹಾಸಿಕವಾಗಿ ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಕಲ್ಯಾಣದ ಕೀರ್ತಿ ಹೆಚ್ಚಿಸೋಣ.
| ಶರಣು ಸಲಗರ ಶಾಸಕ
ರು.೫೧ ಲಕ್ಷ ದೇಣಿಗೆ ವಾಗ್ದಾನ: ಬಸವಕಲ್ಯಾಣದಲ್ಲಿ ೨೦೨೫ರ ಶರನ್ನವರಾತ್ರಿ ದಸರಾ ದರ್ಬಾರ್‌ಗೆ ಶಾಸಕ ಶರಣು ಸಲಗರ ೧೧ ಲಕ್ಷ ರೂ., ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ೫ ಲಕ್ಷ, ಹಾರಕೂಡ ಗ್ರಾಮಸ್ಥರಿಂದ ೨ ಲಕ್ಷ, ಹಾರಕೂಡ ಶ್ರೀಗಳ ಪೂರ್ವಾಶ್ರಮ ಸಹೋದರರಿಂದ ಒಂದು ಲಕ್ಷ ಸೇರಿ ೫೧ ಲಕ್ಷ ರೂ. ದೇಣಿಗೆ ನೀಡುವ ಸಂಬಂಧ ವಾಗ್ದಾನ ಮಾಡಲಾಗಿದೆ ಎಂದು ಹಾರಕೂಡ ಶ್ರೀ ಪ್ರಕಟಿಸಿದರು. ಪ್ರಥಮ ಪೂರ್ವಭಾವಿ ಸಭೆ ಇದಾಗಿದೆ. ಮುಂದಿನ ಸಭೆಗಳಲ್ಲಿ ಭಕ್ತರು ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ತನು, ಮನ, ಧನದಿಂದ ಸಹಕಾರ ನೀಡಲಿದ್ದಾರೆ ಎಂದರು.