

ಬಸವಕಲ್ಯಾಣ: ನಗರದಲ್ಲಿರುವ ಬಸವಣ್ಣನವರ ೧೦೮ ಅಡಿ ಪುತ್ಥಳಿ ಹತ್ತಿರದ ಪರಿಸರದಲ್ಲಿ ೧೧೦ ಅಡಿ ಭಗವಾನ ಗೌತಮ ಬುದ್ಧರ ಪ್ರತಿಮೆ ಸ್ಥಾಪನೆ ಆಗಲಿ ಎಂದು ಔರಂಗಾಬಾದ್‌ನ ಭಿಕ್ಕು ಕರುಣಾನಂದ ಥೇರೊ ಸದಾಶಯ ವ್ಯಕ್ತಪಡಿಸಿದರು.
ನಗರದ ಸಸ್ತಾಪುರ ಬಂಗ್ಲಾ ರಸ್ತೆಯ ಬಿಸಿಎಂ ಹಾಸ್ಟೆಲ್ ಹತ್ತಿರ ಸಾಮ್ರಾಟ್ ಅಶೋಕ ಬುದ್ಧ ವಿಹಾರ ಚಾರಿಟೇಬಲ್ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಧಮ್ಮ ಪರಿಷದ್ ಹಾಗೂ ಧಮ್ಮ ಪ್ರವಚನ ಮತ್ತು ಸಾವಿತ್ರಿಬಾಯಿ ಫುಲೆ ಜಯಂತ್ಯತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕಾರ್ಯಕ್ರಮದ ವೇದಿಕೆ ಪಕ್ಕದ ಗುಡ್ಡದ ಮೇಲೆ ಮೂರ್ತಿ ಸ್ಥಾಪಿಸಲು ಚಾರಿಟೇಬಲ್ ಟ್ರಸ್ಟ್ ಸಂಕಲ್ಪ ಮಾಡಲಿ ಎಂದರು.
ಧಮ್ಮ ಪರಿಷದ್‌ಗಳು ನಡೆಯುವ ಅಗತ್ಯವಿದೆ. ಮಕ್ಕಳಿಗೆ ಮನೆಯಲ್ಲೇ ಧಮ್ಮ ಸಂಸ್ಕಾರ ನೀಡುವಂತಾಗಬೇಕು. ಬುದ್ಧರ ವಿಚಾರ ಮನುಷ್ಯ, ಸಮಾಜ ಮತ್ತು ದೇಶವನ್ನು ಜೋಡಿಸುವುದಾಗಿದೆ. ಧಮ್ಮವನ್ನು ಜೀವನದಲ್ಲಿ ಆಚರಿಸುವವರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ನಡೆಯುವವರೇ ಅವರ ನಿಜವಾದ ಅನುಯಾಯಿಗಳು ಎಂದು ಹೇಳಿದರು.
ಔರಂಗಾಬಾದ್‌ನ ಭಿಕ್ಕು ಎನ್.ಧಮ್ಮಾನಂದ ಥೇರೊ ಮಾತನಾಡಿ, ಬಸವಣ್ಣನವರು ಸ್ವತಂತ್ರ, ಸಮಾನತೆ ಕಲ್ಪಿಸಿದ ಐತಿಹಾಸಿಕ ನೆಲ ಕಲ್ಯಾಣದಲ್ಲಿ ಧಮ್ಮ ಪರಿಷದ್ ಆಯೋಜಿಸಿರುವುದು ಸಂತಸದ ವಿಷಯ. ಬುದ್ಧ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಸಮಾನತೆ, ಬಂಧುತ್ವ, ವಿವೇಕ ಇದ್ದರೆ ಜೀವನ ಕಲ್ಯಾಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಲಾತೂರಿನ ಭಿಕ್ಕು ಪಯ್ಯಾನಂದ ಥೇರೊ, ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯವಾದಿ, ಚಿಂತಕ ತಾತ್ಯಾರಾವ ಕಾಂಬಳೆ, ಪೂಜ್ಯ ಮಿಲಿಂದ ಗುರೂಜಿ, ಲಾತೂರಿನ ಬಸವಂತಪ್ಪ ಉಬಾಲೆ, ಪ್ರೊ.ಯು.ಡಿ. ಗಾಯಕವಾಡ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ ಮೋರೆ ಮಾತನಾಡಿದರು.
ಔರಂಗಾಬಾದ್‌ನ ಭಿಕ್ಕು ಧಮ್ಮಭೋಧಿ ಥೇರೊ ಸಾನ್ನಿಧ್ಯ, ಕಲಬುರಗಿಯ ಭಂತೆ ಸಂಘಾನಂದ ಸಮ್ಮುಖ ವಹಿಸಿದ್ದರು. ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ರಾಜ್ಯ ಸರ್ಕಾರಿ ನೌಕಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ಆರ್‌ಎಫ್‌ಒ ಮಹೇಂದ್ರಕುಮಾರ, ಪ್ರಮುಖರಾದ ನಾಗನಾಥ ವಾಡೇಕರ್, ದಿಲೀಪ ಸಿಂಧೆ, ನರಸಿಂಗರಾವ ಕಾಂಬಳೆ, ಪ್ರಹ್ಲಾದ್ ಮೋರೆ, ಮನೋಹರ ಮೈಸೆ, ಯುವರಾಜ ಭೆಂಡೆ, ಮನೋಹರ ಮೋರೆ, ವೈಶಾಲಿ ಮೋರೆ, ಅಂಬಣ್ಣ ಘಾಂಗ್ರೆ, ಮಲ್ಲಿಕಾರ್ಜುನ ಮಹೇಂದ್ರಕರ, ಡಾ.ಜೈಶೇನಪ್ರಸಾದ್, ಭೀಮಶಾ ಫುಲೆ, ವಿಜಯಕುಮಾರ ಡಾಂಗೆ, ಗೌತಮ ಜಾಂತೆ, ಮಂಜು ಸಿಂಧೆ, ಪಿಂಟು ಕಾಂಬಳೆ, ಶಂಕರ ಫುಲೆ, ಸಂದೀಪ ಮುಕಿಂದೆ, ಸಾಗರ ರಾಯಗೋಳ, ಅರುಣ ಗಾಯಕವಾಡ ಇತರರಿದ್ದರು.
ಯಾದವ್ ಗಾಯಕವಾಡ ಸ್ವಾಗತಿಸಿದರು. ಅನಿಲ ಶಾಸ್ತ್ರೀ ಹಾಗೂ ನಿತ್ಯಾನಂದ ಮಠಾಳಕರ ನಿರೂಪಣೆ ಮಾಡಿದರು.
ಬುದ್ಧ ಮಾರ್ಗದಲ್ಲಿದೆ ಶಾಂತಿ: ಬುದ್ಧ ಮಾರ್ಗದಿಂದ ದೇಶದಲ್ಲಿ ಶಾಂತಿ, ಸಮೃದ್ಧಿ ಕಾಣಲು ಸಾಧ್ಯವಿದೆ ಎಂದು ನ್ಯಾಯವಾದಿ, ಚಿಂತಕ ತಾತ್ಯಾರಾವ ಕಾಂಬಳೆ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿಶ್ವದ ಎದುರು ಎರಡು ಮಾರ್ಗಗಳಿವೆ. ಒಂದು ಯುದ್ಧ, ಇನ್ನೊಂದು ಬುದ್ಧ ಮಾರ್ಗ. ಬುದ್ಧ ಮಾರ್ಗದಿಂದ ಮಾತ್ರ ಉಜ್ವಲ ಭವಿಷ್ಯವಿದೆ ಎಂದರು. ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರ್ ನನಗೆ ಗೊತ್ತು. ಯಾವುದೇ ದೇವರು ಗೊತ್ತಿಲ್ಲ. ಬಸವಣ್ಣನವರು ೧೨ನೇ ಶತಮಾನದಲ್ಲೇ ಸಮಾನತೆಗಾಗಿ ಕಲ್ಯಾಣದಲ್ಲಿ ಕ್ರಾಂತಿ ಮಾಡಿದ್ದರು. ಇಲ್ಲಿ ಧಮ್ಮ ಪರಿಷದ್ ಆಯೋಜಿಸಿರುವುದನ್ನು ಶ್ಲಾಘಿಸಿದರು.
ಬಸವಕಲ್ಯಾಣ-ಬಂಗ್ಲಾ ರಸ್ತೆ ಬದಿಯಲ್ಲಿ ಬಿಸಿಎಂ ವಸತಿನಿಲಯ ಸಮೀಪದ ಗುಡ್ಡದ ಪರಿಸರದ ಎರಡು ಎಕರೆ ಸ್ಥಳದಲ್ಲಿ ಬುದ್ಧರ ೧೧೦ ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಯೋಜನೆಯಿದೆ. ಇದಕ್ಕಾಗಿ ಪ್ರಯತ್ನಿಸುತ್ತಿದ್ದು, ಎಲ್ಲರ ಸಹಕಾರ ಅವಶ್ಯಕ.
| ಸುರೇಶ ಮೋರೆ ಅಧ್ಯಕ್ಷ, ಸಾಮ್ರಾಟ್ ಅಶೋಕ ಬುದ್ಧ ವಿಹಾರ ಚಾರಿಟೇಬಲ್ ಟ್ರಸ್ಟ್