

ಸ.ದಾ. ಜೋಶಿ ಬೀದರ್
ಕೆ.ಆರ್. ಪೇಟೆ, ಶಿರಾ ಉಪ ಚುನಾವಣೆ ಉಸ್ತುವಾರಿ ಹೊತ್ತು ಭರ್ಜರಿ ಜಯದ ಮೂಲಕ ದಾಖಲೆ ನಿರ್ಮಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಿತ್ತ ಇದೀಗ ಶರಣಭೂಮಿ ಬಸವಕಲ್ಯಾಣದತ್ತ ನೆಟ್ಟಿದೆ. ಶುಕ್ರವಾರ (ನ.13) ಕಲ್ಯಾಣಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಜತೆಗೆ ಸರಣಿ ಸಭೆ ಮತ್ತು ಸಮಾಲೋಚನೆ ನಡೆಸಲಿರುವುದು ಭಾರಿ ಮಹತ್ವ ಪಡೆದಿದ್ದು, ಇಲ್ಲೂ ವಿಜಯದ ಗಾಳಿ ಬೀಸಲು ಕಾರಣರಾಗುತ್ತಾರಾ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅಗಲಿಕೆ ಹಿನ್ನೆಲೆಯಲ್ಲಿ ತೆರವಾದ ಕ್ಷೇತ್ರಕ್ಕೆ ಶೀಘ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಡಜನ್ ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇಲ್ಲಿಂದ ವಿಜಯೇಂದ್ರ ಅವರೂ ಕಣಕ್ಕಿಳಿಯಬಹುದು ಎಂಬ ಚರ್ಚೆಗಳು ನಡೆದಿದ್ದವು. ಆದರೆ ವಿಜಯೇಂದ್ರ ಜತೆಗೆ ಅವರ ತಂದೆ, ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇದನ್ನು ಸ್ಪಷ್ಟವಾಗಿ ನಿರಾಕರಿಸಿ ಚರ್ಚೆಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ಆದರೆ ಪಕ್ಷ ವಿಜಯೇಂದ್ರ ಅವರಿಗೆ ಇಲ್ಲಿನ ಉಸ್ತುವಾರಿ ವಹಿಸುವ ಸಾಧ್ಯತೆ ಹೆಚ್ಚು ಎನ್ನುತ್ತಿರುವುದು ಕೇಸರಿ ಪಡೆ ಜೋಶ್ ಹೆಚ್ಚಿಸಿದೆ.
ಕೆ.ಆರ್. ಪೇಟೆ ಮತ್ತು ಶಿರಾ ಚುನಾವಣೆ ಉಸ್ತುವಾರಿ ಹೊತ್ತು ಅಲ್ಲಿ ಮೊದಲ ಸಲ ಕಮಲ ಅರಳಿಸುವ ಮೂಲಕ ವಿಜಯೇಂದ್ರ ತಮ್ಮ ಸಂಘಟನಾ ಶಕ್ತಿ, ಎದುರಾಳಿಗಳನ್ನು ಚಿತ್ ಮಾಡುವಂಥ ಸಾಮಥ್ರ್ಯ ಮತ್ತು ಗೆಲುವಿನ ತಂತ್ರಗಾರಿಕೆ ರೂಪಿಸುವ ನೈಪುಣ್ಯತೆ ಸಾಬೀತುಪಡಿಸಿದ್ದಾರೆ. ಬಸವಕಲ್ಯಾಣ ಜತೆಗೆ ಮಸ್ಕಿ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಲಿದ್ದು, ವಿಜಯೇಂದ್ರ ಉಸ್ತುವಾರಿಗಾಗಿ ಎರಡೂ ಕಡೆಯ ಮುಖಂಡರು ಇನ್ನಿಲ್ಲದ ಒತ್ತಡ ಹಾಕಿ ದುಂಬಾಲು ಬಿದ್ದಿದ್ದಾರೆ. ವಿಜಯವಾಣಿಗೆ ಲಭ್ಯ ಮಾಹಿತಿ ಪ್ರಕಾರ, ಅವರಿಗೆ ಬಸವಕಲ್ಯಾಣ ಸಾರಥ್ಯ ಸಿಗುವುದು ಬಹುತೇಕ ಖಚಿತವಾಗಿದೆ. ಶುಕ್ರವಾರ ಅವರು ಇಲ್ಲಿಗೆ ಭೇಟಿ ನೀಡಿ ಚುನಾವಣೆ ಸಿದ್ಧತೆ ತಾಲೀಮು ಶುರು ಮಾಡುತ್ತಿರುವುದು ಸಹ ಇದಕ್ಕೆ ಪುಷ್ಠಿ ನೀಡಿದೆ.
ವಿಜಯೇಂದ್ರ ಮೊದಲು ಅನುಭವ ಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ಈ ವೇಳೆ ಅಲ್ಲಿ ಪ್ರಮುಖ ಮಠಾಧೀಶರ ಜತೆ ಸಮಾಲೋಚನೆ ನಡೆಸುವರು. ನಂತರ ಬೃಹತ್ ಬೈಕ್ ರ್ಯಾಲಿ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಅಲ್ಲೇ ಪ್ರಸಾದ ಸ್ವೀಕರಿಸುವರು. ಬಳಿಕ ಮರಾಠಾ ಸಮಾಜ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳುವರು. ಇದಾದ ನಂತರ ತಡೋಳಾ ಮಠಕ್ಕೆ ತೆರಳಿ ಪೂಜ್ಯರೊಂದಿಗೆ ಚರ್ಚಿಸುವರು. ಇವರ ಭೇಟಿ, ಸರಣಿ ಸಭೆ, ಸಮಾಲೋಚನೆ, ಹಲವರ ಅಭಿಪ್ರಾಯ ಸಂಗ್ರಹಿಸಲಿರುವುದನ್ನು ಅವಲೋಕಿಸಿದರೆ ಉಪ ಚುನಾವಣೆ ಗೆಲುವಿನ ಟಾಸ್ಕ್ ಗೆ ಚಾಲನೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಕಳೆದೆರಡು ತಿಂಗಳಿಂದ ಪ್ರಬಲ ಆಕಾಂಕ್ಷಿಗಳು ಟಿಕೆಟ್ಗಾಗಿ ಎಲ್ಲಿಲ್ಲದ ಲಾಬಿ ನಡೆಸುತ್ತಿದ್ದಾರೆ. ವರಿಷ್ಠರು ಜಾತಿ ಸಮೀಕರಣದೊಂದಿಗೆ ಎಲ್ಲವೂ ಅಳೆದು, ತೂಗಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲಿದ್ದಾರೆ. ಹೀಗಾಗಿ ಯಾರಿಗೆ ಅವಕಾಶ ಸಿಗುತ್ತದೆಯೋ ಗೊತ್ತಿಲ್ಲ. ಆದರೆ ಅಭ್ಯರ್ಥಿ ಯಾರೇ ಆಗಲಿ, ಪ್ರತಿಪಕ್ಷಗಳು ಅದೇನೆ ತಂತ್ರ ರೂಪಿಸಲಿ, ವಿಜಯೇಂದ್ರ ಉಸ್ತುವಾರಿ ವಹಿಸಿಕೊಂಡರೆ ಕೆ.ಆರ್.ಪೇಟೆ, ಶಿರಾ ಬಳಿಕ ಕಲ್ಯಾಣದಲ್ಲೂ ಕಮಲ ಅರಳಿಸಿ `ಹ್ಯಾಟ್ರಿಕ್ ಹೀರೋ' ಆಗಿ ಹೊರಹೊಮ್ಮುವುದು ಪಕ್ಕಾ ಎಂಬುದು ಕೇಸರಿ ಪಡೆ ಕಾರ್ಯಕರ್ತರ ಅಚಲ ನಂಬಿಕೆ.
ಇಲ್ಲೇ ಹೂಡುತ್ತಾರೆ ಮೊಕ್ಕಾಂ
ಬಸವಕಲ್ಯಾಣದಲ್ಲಿ ಜನತಾ ಪರಿವಾರ ಮತ್ತು ಕಾಂಗ್ರೆಸ್ ಪಾರುಪತ್ಯ ಮರೆದಿವೆ. 1957ರಿಂದ ಈವರೆಗೆ ನಡೆದಿರುವ 14 ಚುನಾವಣೆಗಳಲ್ಲಿ ಒಮ್ಮೆ (2008) ಮಾತ್ರ ಬಿಜೆಪಿ ಗೆದ್ದಿದೆ. ಮತ್ತೊಮ್ಮೆ ಕಮಲ ಅರಳಿಸುವ ಜತೆಗೆ ಮಹಾತ್ಮ ಬಸವೇಶ್ವರ ನೀಡಿದ ವಿಶ್ವದ ಮೊದಲ ಸಂಸತ್ತಿನ ಐತಿಹಾಸಿಕ ಖ್ಯಾತಿಯ ಕ್ಷೇತ್ರವನ್ನು ತಮ್ಮ ವಶದಲ್ಲಿಟ್ಟುಕೊಳ್ಳುವ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು. ಹೀಗಾಗಿ ಉಪ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಈಗ ವಿಜಯೇಂದ್ರ ಭೇಟಿ ಸರದಿ. ಇವರಿಗೆ ಪಕ್ಷ ಅಧಿಕೃತವಾಗಿ ಉಸ್ತುವಾರಿ ವಹಿಸುತ್ತಲೇ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಮುಂದಿನ ರಣತಂತ್ರ ಹೆಣೆಯಲಿದ್ದಾರೆ. ಇವರ ತಾತ್ಕಾಲಿಕ ವಾಸಕ್ಕಾಗಿ ಬಸವಕಲ್ಯಾಣದಲ್ಲಿ ಸೂಕ್ತ ಮನೆ ಸಹ ನೋಡಲಾಗುತ್ತಿದೆ ಎಂದು ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದರು.
ಮರಾಠಾ ಸಮುದಾಯದತ್ತ ಚಿತ್ತ
ಬಸವಕಲ್ಯಾಣದಲ್ಲಿ ಗೆಲ್ಲಲು ಲಿಂಗಾಯತರ ಜತೆಗೆ 40 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿರುವ ಮರಾಠಾ ಸಮುದಾಯಕ್ಕೆ ಬಿಜೆಪಿ ಹೆಚ್ಚಾಗಿ ನೆಚ್ಚಿಕೊಂಡಿದೆ. ಸಾಮಾನ್ಯವಾಗಿ ಲಿಂಗಾಯತರು ಸೇರಿ ಮೇಲ್ವರ್ಗದ ಒಲವು ಬಿಜೆಪಿ ಪರವೇ ಇರುತ್ತದೆ. ಆದರೆ ಸ್ಥಳೀಯ ಸ್ಥಿತಿಗತಿ, ಅಖಾಡದಲ್ಲಿರುವ ಅಭ್ಯರ್ಥಿ ಸೇರಿ ಇತರ ಕಾರಣದಿಂದ ಮರಾಠಾ ಸಮಾಜ ಒಲವು-ನಿಲುವು ಬದಲಾಗಲೂಬಹುದು. ಹೀಗಾಗಿ ಉಪ ಚುನಾವಣೆಯಲ್ಲಿ ಮರಾಠಾ ಸಮಾಜವನ್ನು ತಮ್ಮತ್ತಲೇ ಸೆಳೆಯುವುದು ಬಿಜೆಪಿ ನಾಯಕರ ಒನ್ ಪಾಯಿಂಟ್ ಅಜೆಂಡಾ ಆಗಿದೆ. ಶುಕ್ರವಾರ ವಿಜಯೇಂದ್ರ ಅವರು ಮರಾಠಾ ಸಮಾಜದವರ ಬೃಹತ್ ಸಭೆಯಲ್ಲಿ ಭಾಗವಹಿಸುವ ಜತೆಗೆ ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಸಮಾಜದ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸುವರು. ಇದು ಮರಾಠಾ ಸಮಾಜದತ್ತ ಪಕ್ಷ ಚಿತ್ತ ಹರಿಸಿರುವುದಕ್ಕೆ ನಿದರ್ಶನ ಎನಿಸಿದೆ. ಈ ಮಧ್ಯೆ ಮರಾಠಾ ಸಮಾಜಕ್ಕೆ 3ಬಿನಿಂದ ಪ್ರವರ್ಗ 2ಎಗೆ ಸೇರಿಸುವುದು ಸೇರಿ ವಿವಿಧ ಬೇಡಿಕೆಗಳು ಸಹ ಮುನ್ನೆಲೆಗೆ ಬಂದಿವೆ. ಉಪ ಚುನಾವಣೆ ಟಿಕೆಟ್ ಮರಾಠಾ ಸಮಾಜಕ್ಕೆ ಕೊಡಬೇಕೆಂಬ ಪ್ರಬಲ ಕೂಗು ಸಹ ಎದ್ದಿದೆ. ಹೀಗಾಗಿ ಶುಕ್ರವಾರದ ಸಭೆ ನಂತರ ಸಾಕಷ್ಟು ಬೆಳವಣಿಗೆಗಳು ಆಗಬಹುದು ಎಂಬ ಚರ್ಚೆ, ವ್ಯಾಖ್ಯಾನ ನಡೆದಿರುವುದು ಕ್ಷೇತ್ರದ ರಾಜಕೀಯ ವಾತಾವರಣ ಗರಂ ಮಾಡಿದೆ.
ಭವ್ಯ ಶಿವಾಜಿ ಪಾಕ್೯ ಯೋಜನೆ ?
ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನ ನೂತನ ಅನುಭವ ಮಂಟಪಕ್ಕೆ ಅಡಿಗಲ್ಲು ಸೇರಿ ವಿವಿಧ ಮಹತ್ವದ ಕಾಮಗಾರಿಗಳಿಗೆ ಚಾಲನೆ ನೀಡುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ. ಇದಕ್ಕೆ ಪೂರಕ ಎಂಬಂತೆ ಅನುಭವ ಮಂಟಪಕ್ಕಾಗಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಜಾಗ ಹಸ್ತಾಂತರ ಪ್ರಕ್ರಿಯೆ ಈಗಷ್ಟೇ ಶುರುವಾಗಿದೆ. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮೊದಲ ಹಂತದಲ್ಲಿ ಸರ್ವೇ ನಂ.211ರ 8.17 ಎಕರೆ ಜಾಗವನ್ನು ಗುರುವಾರವೇ ಮಂಡಳಿ ವಿಶೇಷಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರಿಗೆ ಹಸ್ತಾಂತರಿಸಿದ್ದಾರೆ. 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ತಲೆ ಎತ್ತಲಿದೆ. ಸರ್ಕಾರ ಮೊದಲ ಕಂತಾಗಿ 100 ಕೋಟಿ ರೂ. ಒದಗಿಸಿದೆ. ಉದ್ದೇಶಿತ ಕಾಮಗಾರಿಗೆ ಇನ್ನೂ ಹೆಚ್ಚಿನ ಸ್ಥಳ ಬೇಕು. ಇದರ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ಉಪ ಚುನಾವಣೆ ದೃಷ್ಟಿಯಿಂದ ಅಡಿಗಲ್ಲು ನೆರವೇರಿಸಲು ಈಗ ಪಡೆದಿರುವಷ್ಟು ಜಾಗ ಸಾಕು. 17 ಅಥವಾ 19ರಂದು ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿ ಅಡಿಗಲ್ಲು ನೆರವೇರಿಸುವ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆದಿವೆ. ಈ ವೇಳೆ ನಗರಾಭಿವೃದ್ಧಿ, ಪ್ರವಾಸೋದ್ಯಮ ಇಲಾಖೆಯಿಂದ ಕಲ್ಯಾಣದಲ್ಲಿ 10 ಎಕರೆ ವಿಶಾಲ ಜಾಗದಲ್ಲಿ ಸುಸಜ್ಜಿತ, ಭವ್ಯವಾದ ಛತ್ರಪತಿ ಶಿವಾಜಿ ಮಹಾರಾಜ ಪಾಕ್೯ ಹಾಗೂ ಅವರ ಬೃಹತ್ ಪ್ರತಿಮೆ ನಿರ್ಮಾಣ ಮುಂತಾದ ಕೆಲಸಗಳಿಗೂ ಅಡಿಗಲ್ಲು ಹಾಕಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಚುನಾವಣೆ ದೃಷ್ಟಿಯಿಂದ ಬಿಜೆಪಿಯು ಲಿಂಗಾಯತ-ಮರಾಠಾ ಕಾಂಬಿನೇಷನ್ ಲೆಕ್ಕಾಚಾರದಲ್ಲಿ ತೊಡಗಿರುವುದು ಕಂಡುಬರುತ್ತಿದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶುಕ್ರವಾರ ಬಸವಕಲ್ಯಾಣಕ್ಕೆ ಭೇಟಿ ನೀಡುತ್ತಿರುವುದು ಕಾರ್ಯಕರ್ತರಿಗೆ ವಿಶೇಷವಾಗಿ ಯುವ ಸಮೂಹಕ್ಕೆ ಭಾರಿ ಹುಮ್ಮಸ್ಸು ತಂದಿದೆ. ವರಿಷ್ಠರು ಉಪ ಚುನಾವಣೆ ಉಸ್ತುವಾರಿ ವಿಜಯೇಂದ್ರ ಅವರಿಗೆ ವಹಿಸುತ್ತಾರೆ ಎಂಬ ವಿಶ್ವಾಸವಿದೆ. ಅವರ ಸಾರಥ್ಯ ಸಿಕ್ಕರೆ ಇಲ್ಲಿ ಪಕ್ಷದ ಜಯ ಹೊಸ ದಾಖಲೆ ನಿರ್ಮಿಸುವುದು ಖಚಿತ.| ಬಾಬು ವಾಲಿಬಿಜೆಪಿ ಹಿರಿಯ ಮುಖಂಡ
ಕೆ.ಆರ್. ಪೇಟೆ ಮತ್ತು ಶಿರಾ ಗೆಲುವಿನ ರೂವಾರಿ, ಸಂಘಟನಾ ಚತುರರಾದ ವಿಜಯೇಂದ್ರ ಅವರಿಗೆ ಬಸವಕಲ್ಯಾಣ ಉಪ ಸಮರದ ಉಸ್ತುವಾರಿ ವಹಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ಬಂದಿದೆ. ಇಲ್ಲಿನ ಅಭ್ಯರ್ಥಿ ಯಾರನ್ನೇ ಮಾಡಿದರೂ ಗೆಲ್ಲಿಸಿ ತರುವುದೇ ನಮ್ಮ ಏಕೈಕ ಧ್ಯೇಯ.| ಡಾ.ಶೈಲೇಂದ್ರ ಬೆಲ್ದಾಳೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ