

ಬಸವಕಲ್ಯಾಣ: ನಗರದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಸಂಭ್ರಮದ ಮಧ್ಯೆ ಜರುಗಿತು. ಕೋಟೆಯಿಂದ ಗುರುವಾರ ತಡರಾತ್ರಿ ಮುಖ್ಯ ರಸ್ತೆ ಮಾರ್ಗವಾಗಿ ಆರಂಭವಾದ ಮೆರವಣಿಗೆಯಲ್ಲಿ ಒಂಬತ್ತು ಗಣೇಶ ಮಂಡಳದಿಂದ ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳಿಗೆ ಪುಡ್ಚಾ ವರ್ಷಿ ಲೌಕರ್ ಯಾ ಎಂದು ಭಕ್ತಿ-ಶ್ರದ್ಧೆಯಿಂದ ಸಂಭ್ರಮದ ವಿದಾಯ ಹೇಳಲಾಯಿತು.
ಅಲಂಕೃತ ವಿದ್ಯುತ್ ದೀಪಗಳ ಬೆಳಕಿನಲ್ಲಿ ಸೌಂಡ್ ಸಿಸ್ಟಮ್ ಎದುರು ಯುವ ಸಮೂಹ ಕುಣಿದು ಕುಪ್ಪಳಿಸಿತು. ಮೆರವಣಿಗೆಯುದ್ದಕ್ಕೂ ಭಕ್ತಿ ಸಂಗೀತದ ಅಲೆಯಲ್ಲಿ ಗಣಪತಿ ಬಪ್ಪಾ ಮೋರಯಾ, ಪುಡ್ಚಾ ವರ್ಷಿ ಲೌಕರಿ ಯಾ, ಏಕ್, ದೋ, ತೀನ್ ಚಾರ್, ಗಣಪತಿ ಬಪ್ಪಾ ಜೈಜೈಕಾರ ಘೋಷಣೆ ಮೊಳಗಿದವು.
ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಪಟೇಲ್ ಚೌಕ್, ಧರ್ಮ ಪ್ರಕಾಶ ಗಲ್ಲಿ, ಈಶ್ವರ ನಗರ, ಶಹಾಪುರ ಗಲ್ಲಿ, ಹೊಸಪೇಟ್, ಮದಲಾ ಮಾರುತಿ, ಕುಂಬಾರ ಪಾಳಿ ಗಲ್ಲಿಗಳಲ್ಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳ ಸಾಮೂಹಿಕ ಮೆರವಣಿಗೆ ನಡೆಯಿತು.
ಕೋಟೆಯಿಂದ ರಾತ್ರಿ ೧೨ರ ಸುಮಾರಿಗೆ ಮೆರವಣಿಗೆ ಆರಂಭವಾಗಿ ಮಧ್ಯ ರಾತ್ರಿ ೨ರ ಸುಮಾರಿಗೆ ಗಾಂಧಿ ವೃತ್ತಕ್ಕೆ ತಲುಪಿತು. ಮುಖ್ಯ ರಸ್ತೆ ಬದಿ ಮಹಿಳೆಯರು, ಮಕ್ಕಳು ವೈಭವ ವೀಕ್ಷಿಸಿದರು. ಗಣೇಶ ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಪಕ್ಷದ ಪ್ರಮುಖರು, ಗಣ್ಯರು, ಗಣೇಶ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಗರದಲ್ಲಿ ಸುಮಾರು ೫೦ ಕಡೆ ಪ್ರತಿಷ್ಠಾಪಿಸಲಾಗಿತ್ತು. ಒಂಬತ್ತು ಮಂಡಳಿಗಳ ಗಣೇಶ ಮೂರ್ತಿ ಮೆರವಣಿಗೆ ರಾತ್ರಿ ನಡೆದರೆ, ಗುರುವಾರ ಹಗಲಿನಲ್ಲಿ ಸರಾಫ್ ಬಜಾರ್, ಪರುಷ ಕಟ್ಟಾ ಸೇರಿ ೨೫ಕ್ಕೂ ಹೆಚ್ಚು ಮೂರ್ತಿ ಮೆರವಣಿಗೆ ನಡೆಯಿತು.
ಗಣೇಶ ಮೆರವಣಿಗೆಯಲ್ಲಿ ವಿವಿಧೆಡೆ ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡ ಧನರಾಜ ತಾಳಂಪಳ್ಳಿ ಸೇರಿ ಪ್ರಮುಖರು ಯುವಕರೊಂದಿಗೆ ಸ್ಟೆಪ್ ಹಾಕಿ ಪ್ರೋತ್ಸಾಹಿಸಿದರು.
ಚಾಲನೆ: ನಗರದ ಐತಿಹಾಸಿಕ ಕೋಟೆಯ ಬಳಿ ರಾತ್ರಿ ಹುಮನಾಬಾದ ಡಿವೈಎಸ್‌ಪಿ ಜೆ.ಎಸ್.ನ್ಯಾಮೇಗೌಡ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪೌರಾಯುಕ್ತ ಮನೋಜ ಕಾಂಬಳೆ, ನಗರಸಭೆ ಮಾಜಿ ಅಧ್ಯಕ್ಷ ಮೀರ್ ಅಜರಲಿ ನವರಂಗ, ಯುವರಾಜ ಭೆಂಡೆ, ದಿಗಂಬರ ಜಲ್ದೆ ಇತರರಿದ್ದರು.
ಬಿಗಿ ಬಂದೋಬಸ್ತ್: ಶಾಂತಿಯುತ ಮೆರವಣಿಗೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐಗಳಾದ ಅಲಿಸಾಬ್, ವಿಜಯಕುಮಾರ ನಾಯಕ, ಗುರು ಪಾಟೀಲ, ರಘುವೀರಸಿಂಗ್ ಠಾಕೂರ, ಶ್ರೀನಿವಾಸ ಅಲ್ಲಾಪುರ, ಪಿಎಸ್‌ಐ ಅಂಬರೀಶ ವಾಗ್ಮೋಡೆ ಸೇರಿ ಸಿಬ್ಬಂದಿ ಬಂದೋಬಸ್ತ್ನಲ್ಲಿ ತೊಡಗಿದ್ದರು.