

ಬಸವಕಲ್ಯಾಣ: ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ ಇಲ್ಲಿನ ಒಬ್ಬ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಸಂಪೂರ್ಣ ಲಾಕ್ಡೌನ್ ಆಗಿದೆ. ಜಮಾತ್ನಲ್ಲಿ ನಗರದ ಇಬ್ಬರು ಭಾಗವಹಿಸಿ ಮರಳಿದ್ದರು. ಎರಡು ದಿನಗಳ ಹಿಂದೆ ಇವರ ರಕ್ತ, ಗಂಟಲಿನ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷಗೆ ಕಳಿಸಲಾಗಿದ್ದು, ಆಸ್ಪತ್ರೆ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಇಬ್ಬರ ಪೈಕಿ ಒಬ್ಬರಿಗೆ ಸೋಂಕು ಇರುವು ಮೊದಲ ವರದಿಯಲ್ಲಿ ಪತ್ತೆಯಾದ ಕಾರಣ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿತ ವ್ಯಕ್ತಿ ಹಾಗೂ ಆತನ ಕುಟುಂಬದ 8 ಜನರಿಗೆ ಬೀದರ್ ಬ್ರಿಮ್ಸ್ ಐಸೋಲೇಷನ್ ವಾರ್ಡ್ಗೆ ಕಳಿಸಲಾಗಿದೆ. ಇನ್ನೋರ್ವ ತಮ್ಮ ಮನೆಯಲ್ಲಿದ್ದಾನೆ.
ಬುಧವಾರ ರಾತ್ರಿಯೇ ಎಸಿ ಭಂವರಸಿಂಗ್ ಮೀನಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗಿತ್ತು. ಗುರುವಾರ ಬೆಳಗ್ಗೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮೆಡಿಕಲ್ ಸಮೇತ ಎಲ್ಲ ಅಂಗಡಿ-ಮುಗ್ಗಟ್ಟುಗಳು ಬಂದ್ ಮಾಡಿದ್ದರಿಂದ ಇಡೀ ನಗರ ಸ್ಥಬ್ಧವಾಗಿದೆ.
ನಗರದಲ್ಲಿ ಈ ಇಬ್ಬರ ಮನೆ ಇರುವ ಹರಳಯ್ಯ ವೃತ್ತದ ಪ್ರದೇಶದಲ್ಲಿ ಎರಡು ಕಡೆಯಲ್ಲಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಪೂರ್ಣ ಜನರ ಮತ್ತು ವಾಹನ ಸಂಚಾರ ನಿಷೇಧಿಸಲಾಗಿದೆ. ನಗರದಲ್ಲಿಯೂ ಎಲ್ಲ ಆಯ್ದ ಸ್ಥಳಗಳಲ್ಲಿ ಪೊಲೀಸ್ ನಿಯೋಜಿಸಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿತರ ಕುಟುಂಬದವರಿಗೆ ಗೃಹ ನಿರ್ಬಂಧನದಲ್ಲಿ ಇರುವಂತೆ ಸೂಚಿಸಿ, ನಿಗಾ ವಹಿಸಲಾಗಿದೆ. ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಜನರು ಆತಂಕಗೊಂಡಿದ್ದು, ತಮ್ಮ ತಮ್ಮ ಕಾಲನಿಗಳ ರಸ್ತೆಗೆ ಅಡ್ಡಲಾಗಿ ಕಟ್ಟಿಗೆ, ಪೈಪ್ಗಳನ್ನು ಕಟ್ಟಿ ಬೇರೆ ಜನರ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿದ್ದಾರೆ.