

ಬಸವಕಲ್ಯಾಣ: ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ವಿಶ್ವದ ಜನ ಕಲ್ಯಾಣದತ್ತ ನೋಡಲಿದ್ದಾರೆ. ಇದರ ಜತೆಗೆ ನಗರದ ಸಮಗ್ರ ಅಭಿವೃದ್ಧಿ ಆಗಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ರಥ ಮೈದಾನದ ಸಭಾ ಭವನದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿರುವುದು ಖುಷಿ ತಂದಿದ್ದು, ಈ ಭಾಗದ ಸಮಗ್ರ ಅಭಿವೃದ್ಧಿ, ಬಡವರ, ರೈತರ ಕಲ್ಯಾಣವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸ್ವಾತಂತ್ರ್ಯೋತ್ಸವಕ್ಕೆ ಸಿಕ್ಕಷ್ಟೇ ಪ್ರಾಮುಖ್ಯತೆ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಿಗಬೇಕು. ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಆಗಬೇಕು. ತಾಲೂಕಿನಲ್ಲಿ ವ್ಯಾಪಕ ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ತಳ ಮಟ್ಟದಲ್ಲಿ ಹೋಗಿ ಕೆಲಸ ಮಾಡುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತ ಮುಕುಲ ಜೈನ್ ಮಾತನಾಡಿ, ಕಲ್ಯಾಣ ಕರ್ನಾಟಕ ಉತ್ಸವದ ಮಹತ್ವ, ಇತಿಹಾಸ ಮತ್ತು ವೈಶಿಷ್ಟತೆಯನ್ನು ತಿಳಿಸಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ದೇಶ ಭಕ್ತರನ್ನು, ಮಹಾತ್ಮರನ್ನು ಸ್ಮರಿಸಬೇಕು. ಹಕ್ಕಿನ ಜತೆಗೆ ಪ್ರತಿಯೊಬ್ಬರು ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಅದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಹುಲಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ದಿಲೀಪಕುಮಾರ ಪತಂಗೆ ವಿಶೇಷ ಉಪನ್ಯಾಸ ನೀಡಿದರು.
ಸ್ಮಾಟ್ಸ್ ಕಿಡ್ಸ್ ಶಾಲೆ ವಿದ್ಯಾರ್ಥಿನಿ ಭಾಗ್ಯಶ್ರೀ ಬಿರಾದಾರ, ಎಸ್‌ಬಿಆರ್ ವಿದ್ಯಾರ್ಥಿ ಪ್ರಣಬ ಮಚೇಂದ್ರ ಭಾಷಣ ಗಮನ ಸೆಳೆಯಿತು.
ನಗರಸಭೆ ಅಧ್ಯಕ್ಷ ಎಂಡಿ.ಸಗೀರೋದ್ದಿನ್, ಸರ್ಕಾರಿ ನೌಕರರ ಸಂಘದ ತಾಲೂಕು ಅಯಕ್ಷ ದಿಲೀಪಕುಮಾರ ಉತ್ತಮ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ, ಬಿಇಒ ಸಿದ್ದವೀರಯ್ಯ ರುದನೂರ, ಸಿಪಿಐ ಅಲಿಸಾಬ್, ಎಇಇ ಶಿವರಾಜ ಪಲ್ಲೇರಿ ಇದ್ದರು. ತಹಸೀಲ್ದಾರ್ ಡಾ.ದತ್ತಾತ್ರೆಯ ಗಾದಾ ಸ್ವಾಗತಿಸಿದರು. ಶಿವಕುಮಾರ ಜಡಗೆ ನಿರೂಪಣೆ ಮಾಡಿದರು. ಗಿರಿಧರ ಧನ್ನೂರೆ ವಂದಿಸಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯರಸ್ತೆಯ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ಮೂಲಕ ರಥ ಮೈದಾನದವರೆಗೆ ಮೆರವಣಿಗೆ ಸಾಗಿತು. ಕೋಟೆ, ನಗರಸಭೆ, ನೆಹರು ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ರಥ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಇದ್ದರು.