ಕಲ್ಯಾಣದ ಧ್ವನಿಯಾಗಲಿ ಸಂಪುಟ ಸಭೆ

Arjun Bhadre
Published on

ಕಲಬುರಗಿ: ನಗರದಲ್ಲಿ ಸೆ.೧೭ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಹಾಗೂ ದುಡಿಯುವ ವರ್ಗ ಸೇರಿ ಎಲ್ಲರ ಅಭಿವೃದ್ಧಿಗೆ ತೀರ್ಮಾನಿಸಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು.
ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಬೇಕು, ೩೭೧(ಜೆ) ಜಾರಿಯಾಗಿ ೧೦ ವರ್ಷವಾಗಿದ್ದು, ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರೂ ಕೋಟಿ ರೂ. ನೀಡಿದ್ದರೂ ಬದಲಾವಣೆ ಆಗಿಲ್ಲ. ಕೆಕೆಆರ್‌ಡಿಬಿಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುವುದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹೇಳಿದ್ದು, ತನಿಖೆ ಪೂರ್ಣಗೊಂಡಿಲ್ಲ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ೩೦೦ ಕೋಟಿ ರೂ. ಅನುದಾನ ನೀಡಿದ್ದು, ಸಂಘದಲ್ಲಿ ನಡೆದ ಭ್ರಷ್ಟಾಚಾರ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಡಾ.ಅಜಯ್‌ಸಿಂಗ್ ಅಧ್ಯಕ್ಷರಾದ ನಂತರ ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ವರ್ಷವಾದರೂ ಕಾಮಗಾರಿ ಆರಂಭಿಸಿಲ್ಲ.ನರೇಗಾ ಕಾಮಗಾರಿಯಲ್ಲಿ ವಿವಿಧೆಡೆ ಅಕ್ರಮ ನಡೆದಿವೆ. ಸರ್ಕಾರ ಈ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ, ಕಪೀಲ ಸಿಂಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net