ಕಲ್ಯಾಣದ ಆಶಯ ಈಡೇರಿಸಲು ಶ್ರಮ

0111klb31
Published on

ಕಲಬುರಗಿ: ಭ್ರಷ್ಟ ಆಡಳಿತದಿಂದ ಮನನೊಂದ ಕನ್ನಡಿಗರು ನಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದು, ಕನ್ನಡಿಗರ ಆಶೋತ್ತರಗಳನ್ನು ಈಡೇರಿಸಲು ಬದ್ಧತೆಯಿಂದ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಕಲ್ಯಾಣದ ಆಶಯವನ್ನು ಈಡೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

ನಗರದ ನಗರೇಶ್ವರ ಶಾಲೆಯಲ್ಲಿ ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ ಧ್ವಜಾರೋಹಣ ಮಾಡಿ ಮಾತನಾಡಿ, ರಾಜ್ಯದ ಜನರ ಉನ್ನತಿಗೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದಿದ್ದು, ಇದರಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ೪೮ರಿಂದ ೬೦ ಸಾವಿರ ರೂ. ಮೌಲ್ಯದ ಸೌಲಭ್ಯ ದೊರೆಯಲಿದೆ. ಆರ್ಥಿಕ ಸ್ಥಿರತೆ, ಸಾಮಾಜಿಕ ಪ್ರಗತಿಪರ ಅಭಿವೃದ್ಧಿಗೆ ಜಾತಿ, ಧರ್ಮವಿಲ್ಲದ ಅಭಿವೃದ್ಧಿ ಸರ್ಕಾರದ ಧ್ಯೇಯ ಎಂದು ಹೇಳಿದರು.

ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಇದುವರೆಗೆ ೨೨೯.೭೯ ಲಕ್ಷ ಮಹಿಳಾ ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ೪೨ ಹೊಸ ಮಾರ್ಗದಲ್ಲಿ ಬಸ್ ಓಡಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆ ಅಡಿ ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲೇ ೪.೬೭ ಲಕ್ಷ ಪಡಿತರ ಖಾತೆದಾರರಿಗೆ ೨೭.೬೫ ಕೋಟಿ ಜಮೆ ಮಾಡಲಾಗಿದೆ. ಗೃಹ ಜ್ಯೋತಿ ಅಡಿ ೫.೧೮ ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಲಾಭ, ಗೃಹ ಲಕ್ಷ್ಮೀ ಅಡಿ ೫.೮೯ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ೫ ಸಾವಿರ ಕೋಟಿ ರೂ. ಘೋಷಿಸಿದ್ದು, ೩ ಸಾವಿರ ಕೋಟಿ ರೂ.ಅನುದಾನ ಹಂಚಲಾಗಿದೆ. ಶಿಕ್ಷಣದ ಪ್ರಗತಿಗೆ ಅಕ್ಷರ ಆವಿಷ್ಕಾರ ಮಾಡಲಾಗಿದೆ ಎಂದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಶಶೀಲ ನಮೋಶಿ, ಡಾ.ಚಂದ್ರಶೇಖರ ಪಾಟೀಲ್, ಮೇಯರ್ ವಿಶಾಲ ದರ್ಗಿ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ ಪಾಟೀಲ್, ಪ್ರಮುಖರಾದ ಸಂತೋಷ ಪಾಟೀಲ್ ಡೊಣ್ಣೂರ, ಅರುಣಕುಮಾರ ಎಂ.ವೈ.ಪಾಟೀಲ್, ಜಗದೇವ ಗುತ್ತೇದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net