ಕಲ್ಯಾಣದ ಅಭಿವೃದ್ಧಿಗೆ ಬೇಕು ರು. ೨೦೦ ಕೋಟಿ

23BK1
Published on

ಬಸವಕಲ್ಯಾಣ: ಶರಣರ ಕಾಯಕ ಭೂಮಿ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಕಲ್ಯಾಣ ಅಂತಾರಾಷ್ಟಿಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಪೂರಕವಾಗಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ೨೦೦ ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಈ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ನಗರ ಸಭೆಯಲ್ಲಿ ಶನಿವಾರ ಆಯೋಜಿಸಿದ್ದ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಸಂದೇಶ ಸಾರಿದ ಕಲ್ಯಾಣದ ನೆಲದಲ್ಲಿ ಪೌರ ಕಾರ್ಮಿಕರು ಜನರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಕಲ್ಯಾಣದ ಸೌದರ್ಯ ಹೆಚ್ಚಿಸುತ್ತಿದ್ದಾರೆ. ನಗರದ ಸ್ವಚ್ಛತೆ ಹಾಗೂ ಸುಂದರೀಕರಣಕ್ಕೆ ಪೌರ ಕಾರ್ಮಿಕರ ಕೊಡುಗೆ ಅನನ್ಯ ಎಂದರು.

ನಗರ ಸಭೆಯಲ್ಲಿ ಹಲವು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಲ್ಲಿ ಹಲವರ ನೌಕರಿ ಖಾಯಂ ಆಗಿಲ್ಲ. ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ. ಕಾಯಂ ಆದವರ ನೌಕರಿ ಕಾಯಂಗೊಳಿಸುವ ಸಂಬಂಧ ಸರ್ಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು. ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಲು ಪ್ರಯತ್ನಿಸುತ್ತೇನೆ ಎಂದರು.

ನಗರ ಸಭೆ ಮಾಜಿ ಅಧ್ಯಕ್ಷ ಶಹಜಹಾನ ತನ್ವೀರ್ ಅಹ್ಮದ್, ಸದಸ್ಯೆ ನಿರ್ಮಲಾ ಶಿವಣಕರ, ಡಾ.ಜಯಪ್ರಕಾಶ ಮಾತನಾಡಿದರು. ಎಇಇ ಶಿವಶರಣಪ್ಪ ಸಜ್ಜನಶೆಟ್ಟಿ, ಕಮಲಾಕರ ಪಾಟೀಲ್ ಉಪಸ್ಥಿತರಿದ್ದರು. ನಗರ ಸಭೆಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಗರ ಸಭೆ ಪೌರಾಯುಕ್ತ ಮನೋಜ ಕಾಂಬಳೆ ಸ್ವಾಗತಿಸಿದರೆ, ದೈಹಿಕ ಶಿಕ್ಷಕ ಶಿವಕುಮಾರ ಜಡಗೆ ನಿರೂಪಣೆ ಮಾಡಿದರು. ಗಂಗಾಧರ ಮೂಲಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net