ಕಲ್ಯಾಣ ಮುಖ್ಯ ರಸ್ತೆಯಲ್ಲಿ ಹೆಬ್ಬಾವು

9f5ff8f9-1803-46d2-917c-296d69f4bc1c
Published on

ಬಸವಕಲ್ಯಾಣ: ಕತ್ತಲೆಯ ರಾತ್ರಿಯಲ್ಲಿ ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಹೆಬ್ಬಾವಿನ ಮರಿಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಸಸ್ತಾಪುರ ಬಂಗ್ಲಾದಿಂದ ಬಸವಕಲ್ಯಾಣಕ್ಕೆ ಬರುವ ಮುಖ್ಯ ರಸ್ತೆಗೆ ಶಾಸಕರ ಕಾರ್ಯಾಲಯದ ಸಮೀಪ ಡಿವೈಡರ್ ನಲ್ಲಿ ಸುಮಾರು ಎಂಟು ಅಡಿ ಉದ್ದದ ಒಂದು ವರ್ಷದ ಹೆಬ್ಬಾವಿನ ಮರಿ ಭಾನುವಾರ ಮಧ್ಯ ರಾತ್ರಿ 1.30ರ ಸುಮಾರಿಗೆ ಪತ್ತೆಯಾಗಿದೆ. ತಾಯಿ ಹೆಬ್ಬಾವಿನಿಂದ ಬೇರ್ಪಟ್ಟು ವಾಹನ ಸಂಚಾರವಿರುವ ಅರ್ಧ ರಸ್ತೆ ನುಸುಳಿಕೊಂಡು ಡಿವೈಡರ್ ನಲ್ಲಿ ಬಂದ ಹೆಬ್ಬಾವಿನ ಮರಿ ದಾರಿಗಾಗಿ ಪರಿತಪಿಸುತ್ತಿದ್ದಾಗ ರಸ್ತೆಗೆ ಸಂಚರಿಸುತ್ತಿದ್ದ ವ್ಯಕ್ತಿ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಉಪ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಯಾಚೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಾಚೆ ನೇತೃತ್ವದಲ್ಲಿ ತಕ್ಷಣ ತಡೋಳಾ ಗ್ರಾಮದ ಉರಗ ತಜ್ಞ ಸೈಯದ್ ಗನಿಸಾಬ್ ಹಾಗೂ ಅವರ ಪುತ್ರ ಸಲಾವುದ್ದಿನ್ ಅವರನ್ನು ಕರೆಸಿ ಹೆಬ್ಬಾವಿನ ಮರಿಯನ್ನು ಸುರಕ್ಷಿತವಾಗಿ ಹಿಡಿದು, ಸೋಮವಾರ ಬೆಳಗ್ಗೆ ರಕ್ಷಿತಾರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿದೆ.
ಹೆಬ್ಬಾವಿನ ಮರಿ ಪತ್ತೆಯಾಗಿದ್ದು, ಇದೇ ಪರಿಸರದಲ್ಲಿ ಇದರ ತಾಯಿ ಹೆಬ್ಬಾವು ಇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸುತ್ತಲಿನ ಪ್ರದೇಶದಲ್ಲಿ ಹೆಬ್ಬಾವು ಕಂಡರೆ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net