ಕಲ್ಯಾಣ ಮಹಾಮನೆ ಬಸವ ಬೆಳಕಾಗಲಿ

5BK2
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಶನಿವಾರ ಆಯೋಜಿಸಿದ್ದ ಶರಣೆ ದಾನಮ್ಮ ಉತ್ಸವ, ತೃತೀಯ ಶರಣ ಸಮಾಗಮ ಉದ್ಘಾಟನಾ ಸಮಾರಂಭದಲ್ಲಿ ಪ್ರೊ.ಶಾಲಿನಿ ದೊಡ್ಡಮನಿ ಅವರಿಗೆ ವರದಾನಿ ಶರಣೆ ದಾನಮ್ಮ ದೇವಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಬಸವಪ್ರಭು ಸ್ವಾಮೀಜಿ, ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಮುಖಂಡ ಪೂಜ್ಯ ಲಲಿತಾ ಮಾತೆ, ಮುಖಂಡ ದಿಲೀಪಕುಮಾರ ಶಿಂಧೆ, ವಿಜಯಕುಮಾರ ದಂಪತಿ ಇತರರಿದ್ದರು.
Published on

ಬಸವಕಲ್ಯಾಣ: ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಬಸವ ತತ್ವದ ಬೆಳಕು ನೀಡುವ ಹೆಮ್ಮರವಾಗಿ ಬೆಳೆಯಲಿ ಎಂದು ಬಸವ ಮಹಾಮನೆ ಟ್ರಸ್ಟ್​ನ ಅಧ್ಯಕ್ಷರಾದ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಸದಾಶಯ ವ್ಯಕ್ತಪಡಿಸಿದರು.

ಶರಣೆ ದಾನಮ್ಮ ದೇವಿ ತಪೋಕ್ಷೇತ್ರವಾಗಿರುವ ತಾಲೂಕಿನ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಶರಣೆ ದಾನಮ್ಮ ಉತ್ಸವ, ತೃತೀಯ ಶರಣ ಸಮಾಗಮ ಹಾಗೂ ಜ್ಞಾನ ಶಿಬಿರದಲ್ಲಿ ಮಾತನಾಡಿದ ಪೂಜ್ಯರು, ಬಸವಪ್ರಭು ಸ್ವಾಮೀಜಿ ಅಪ್ಪಟ ಬಸವತತ್ವ ಪ್ರಚಾರಕರು, ತತ್ವ ನಿಷ್ಠರು ಹಾಗೂ ಚಾರಿತ್ರ್ಯವಂತರಾಗಿದ್ದಾರೆ. ಬಸವ ತತ್ವ ಪ್ರಚಾರದ ಅವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕಲ್ಯಾಣದ ವ್ಯಾಪ್ತಿ ಅತ್ಯಂತ ವಿಶಾಲವಾಗಿತ್ತು. ಶರಣರ ಗವಿ, ಗುಹೆಗಳು, ಸ್ಮಾರಕ ಸ್ಥಳಗಳು ಇದ್ದವು. ಆದರೆ ಈಗ ಸಾಕಷ್ಟು ಸ್ಥಳಗಳು ಅಜ್ಞಾನತವಾಗಿ ಉಳಿದುಕೊಂಡಿದ್ದು, ಅಜ್ಞಾತವಾಗಿರುವ ಶರಣರ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯಬೇಕಿದೆ. ಶರಣೆ ದಾನಮ್ಮ ದೇವಿಯ ತಪೋಸ್ಥಳ ಗುರುತಿಸಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿರುವ ಬಸವ ಪ್ರಭು ಸ್ವಾಮೀಜಿ ಕಾರ್ಯ ಶ್ಲಾಘನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಘಾಟನೆ ನೆರವೇರಿಸಿದ ಜಿಲ್ಲಾ ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಮಾತನಾಡಿ, ಪುಸ್ತಕವಿಲ್ಲದ ಮನೆ, ಆತ್ಮವಿಲ್ಲದ ದೇಹವಿದ್ದಂತೆ. ಮನೆಯಲ್ಲಿ ಪುಸ್ತಕ ಇಡುವ ಸಂಸ್ಕೃತಿಯನ್ನು ಬೆಳೆಸಬೇಕು. ವಚನ ಸಾಹಿತ್ಯದ ಪುಸ್ತಕಗಳನ್ನು ಓದುವ ಮೂಲಕ ವಚನಗಳನ್ನು ಜೀವನದಲ್ಲಿ ಪಾಲಿಸಲು ಪ್ರಯತ್ನಿಸಿದಾಗ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿರಂಕಾರಿ ಸಂತ ದಂಪತಿ ವಿಜಯಕುಮಾರ ಅವರು ಜಗದಗಲ ಪರಮಾತ್ಮನ ದರ್ಶನ ಕುರಿತು ವಿಶೇಷ ಅನುಭಾವ ನೀಡಿದರು.

ಈ ವರ್ಷದ ದಾನಮ್ಮದೇವಿ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಸಾಹಿತಿಗಳು, ಕನ್ನಡ-ಮರಾಠಿ ಸಾಹಿತ್ಯದ ಅನುವಾದಕ ಪ್ರೊ. ಶಾಲಿನಿ ದೊಡ್ಡಮನಿ ಮಾತನಾಡಿ, ಅಕ್ಕ ಜಗತ್ತಿನ ಮಹಿಳಾ ಕುಲದ ಮುಕುಟ ಮಣಿ. ಅಕ್ಕನ ಕುರಿತು ಬಸವಪ್ರಭು ಸ್ವಾಮೀಜಿ ರಚಿಸಿರುವ ಅಕ್ಕನ ಚಿರಿತಾಮೃತ ಅಕ್ಕ ಸಮಗ್ರ ಚರಿತ್ರೆ ಪರಿಚಯಿಸುವ ಅಮೂಲ್ಯವಾದ ಗ್ರಂಥವಾಗಿದೆ ಎಂದರು.

ಕರ್ನಾಟಕ ರಾಜ್ಯ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಹಾಗೂ ಅಕ್ಕನ ಚರಿತಾಮೃತ ಪುಸ್ತಕ ಬಿಡುಗಡೆ ಮಾಡಿದ ಸೊಲ್ಲಾಫುರದ ಅಮರ ಜ್ಯೋತಿ ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ವರಿ ತಳಂಗೆ ಪುಸ್ತಕ ಕುರಿತು ಮಾತನಾಡಿದರು.

ನೇತೃತ್ವ ವಹಿಸಿದ್ದ ಉತ್ಸವದ ರೂಪಾರಿಗಳು, ಕಲ್ಯಾಣ ಮಹಾಮನೆಯ ಸದ್ಗುರು ಶೀ ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಮೋರಖಂಡಿ-ಪರ್ತಾಪುರನ ಶ್ರೀಸಾಯಿ ಮಂದಿರದ ಅಧ್ಯಕ್ಷೆ ಪೂಜ್ಯಲಲಿತಾ ಮಾತೆ ಸಮ್ಮುಖ ವಹಿಸಿದ್ದರು. ತಾಪಂ ಮಾಜಿ ಉಪಾಧ್ಯಕ್ಷ ದಿಲೀಪ ಶಿಂದೆ, ರೇವಣಪ್ಪ ಹೆಗ್ಗಣೆ ಇದ್ದರು. ಜಗದ್ಗುರು ನಿಜಲಿಂಗ ಸ್ವಾಮೀಜಿ ಸ್ವಾಗತಿಸಿದರು. ರಂಜಿತಾ ರೆಡ್ಡಿ ವಂದಿಸಿದರು. ವಿಜಯರತ್ನ ನಿರೂಪಣೆ ಮಾಡಿದರು.

ಪತಂಜಲಿ ಯೋಗ ಗುರು ಮಾತೆಯರಾದ ತುಳಜಾ, ಮೇಘಾ ಯೋಗಾಸನ ನಡೆಸಿಕೊಟ್ಟರು. ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ವಚನ ಪಠಣ ನೆರವೇರಿತು.

ವಚನ ಸಾಹಿತ್ಯ ಸ್ವತಂತ್ರ: ಬಸವಾದಿ ಶರಣು ಸ್ವತಂತ್ರರು, ಅವರು ನೀಡಿದ ಜಾಗತಿಕ ಮೌಲ್ಯದ ವಚನ ಸಾಹಿತ್ಯವೂ ಸ್ವತಂತ್ರ ಹಾಗೂ ಸಾರ್ವಕಾಲಿಕ. ಇದು ಮಾನವ ಕುಲಕೋಟಿಯ ಆಸ್ತಿ ಎಂದು ಶ್ರೀ ಸಿದ್ಧö್ದರಾಮ ಶರಣರು ಬೆಲ್ದಾಳ ಹೇಳಿದರು. ಈ ಕುರಿತು ಸಮಗ್ರ ಅಧ್ಯಯನ ಮಾಡಿ, ದಾಖಲೆಗಳೊಂದಿಗೆ ಸತ್ಯ ಶರಣರು ಸತ್ಯಶೋಧ ಸಂಶೋಧನಾ ಗಂಥ ತಾವು ರಚಿಸಿದ್ದು, ಇದು ಬಿಡುಗಡೆಯೂ ಆಗಿದೆ. ಉತ್ತರ ಭಾರತದ ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಯಲ ಹಾಗೂ ಹಿಂದು ವಿಶ್ವವಿದ್ಯಾಯಲ, ದಕ್ಷಿಣ ಭಾರತದ ಪಾಂಡಿಚೇರಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಭೇಟಿ ನೀಡಿದ್ದೇನೆ. ನಾಲ್ಕು ವೇದ, ಆಗಮ, ಪುರಾಣ ಸೇರಿ ೨೨೧ ಗ್ರಂಥಗಳನ್ನು ಅಧ್ಯಯನ ಮಾಡಿ ಈ ಗ್ರಂಥ ರಚಿಸಲಾಗಿದ್ದು, ಎಲ್ಲ ಸಂಶಯಗಳಿಗೆ, ಪ್ರಶ್ನೆಗಳಿಗೆ ಇದರಲ್ಲಿ ಉತ್ತರಿಸಿದ್ದಾಗಿ ಹೇಳಿದರು.

ಅಕ್ಕನ ಚರಿತಾಮೃತ ಪುಸ್ತಕ ಬಿಡುಗಡೆ: ಶ್ರೀ ಬಸವ ಪ್ರಭು ಸ್ವಾಮೀಜಿ ಅವರು ಬರೆದ ಅಕ್ಕನ ಚರಿತಾಮೃತ ಪುಸ್ತಕವನ್ನು ಸೊಲ್ಲಾಪುರದ ಅಮರ ಜ್ಯೋತಿ ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ವರಿ ತಳಂಗೆ ಲೋಕಾರ್ಪಣೆಗೊಳಿಸಿದರು. ಅಕ್ಕನ ಜ್ಞಾನದ ಕುರಿತು ವಿಮಾರ್ಶಾತ್ಮಕವಾದ ಕೃತಿಯನ್ನು ಪೂಜ್ಯರು ರಚಿಸಿದ್ದಾರೆ. ಅಕ್ಕನ ಸಮಗ್ರ ಜೀವನ ಚರಿತ್ರೆ ಇದರಲಿದ್ದು, ಇದನ್ನು ಓದುವ ಮೂಲಕ ಅಕ್ಕ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಪುಸ್ತಕದ ಅರಿವು ಆಚಾರಕ್ಕೆ ಬಂದರೆ ಸಂಸ್ಕಾರ ಬೆಳೆಯುತ್ತದೆ. ಸಂಸ್ಕಾರ ಬೆಳೆದಾಗ ಮನೆಗಳೇ ಅನುಭಾವದ ಕೇಂದ್ರಗಳಾಗುತ್ತವೆ. ಸಾಧನೆ ಮಾಡುವ ಗುರಿ ಇದ್ದರೆ ಸಾಧನೆಗೆ ಬಾಗಿಲುಗಳು ತೆರೆದುಕೊಳ್ಳುತ್ತವೆ. ಶರಣೆ ದಾನಮ್ಮನ ತಪೋಸ್ತಾನ ಅಭಿವೃದ್ದಿ ಆಗಬೇಕು ಎನ್ನುವ ಸಂಕಲ್ಪಪಿದೆ. ಬಸವಾದಿ ಶರಣರ ತತ್ವ ಸಂದೇಶಗಳನ್ನು ಜನರಿಗೆ ತಲುಪಿಸಬೇಕು ಎನ್ನುವ ಆಶಯದಿಂದ ಉತ್ಸವ ಹಾಗೂ ಶರಣ ಸಮಾಗಮ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ.

| ಶ್ರೀ ಬಸವಪ್ರಣು ಸ್ವಾಮೀಜಿ ಕಲ್ಯಾಣ ಮಹಾಮನೆ, ಗುಣತೀರ್ಥವಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net