

ಚಿತ್ರದುರ್ಗ: ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಹರಳಯ್ಯ ಗುರುಪೀಠದಲ್ಲಿ ನ. 28ರಂದು ಬೆಳಗ್ಗೆ 11ಕ್ಕೆ ಕಲ್ಯಾಣ ಕ್ರಾಂತಿ ವಿಜಯೋತ್ಸವ, ಮಹಾ ಶಿವಶರಣ ಹರಳಯ್ಯ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವ ಹರಳಯ್ಯ ಸ್ವಾಮೀಜಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ವೇಳೆ ಅರವಿಂದ ಜತ್ತಿ ಅವರಿಗೆ ಶ್ರೀ ಮಹಾ ಶಿವಶರಣ ಹರಳಯ್ಯ, ಡಾ.ಗೊ.ಚನ್ನಬಸಪ್ಪ ಅವರಿಗೆ ಮಧುವರಸ ಪ್ರಶಸ್ತ್ರಿ ಪ್ರಧಾನ, ಅಂತರ್ಜಾತಿ ವಿವಾಹವಾದ 100 ಮಂದಿ ಆದರ್ಶ ದಂಪತಿಗಳಿಗೆ ಸನ್ಮಾನ, 3 ದಿನ ನಾಟಕೋತ್ಸವ ಹಾಗೂ ಚಿಣ್ಣರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಿವರುದ್ರ ಶ್ರೀ, ಬಸವಪ್ರಭು ಶ್ರೀ ಧ್ವಜಾರೋಹಣ ನೆರವೇರಿಸುವರು. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಜ್ಞಾನಪ್ರಕಾಶ ಶ್ರೀ ಉದ್ಘಾಟಿಸುವರು. ಗುರು ಮಹಾಂತಪ್ಪ ಶ್ರೀ, ಸುಖದೇವ್ ಮಹಾರಾಜ್ ಶ್ರೀ ಟ್ರೈಲರ್ ಬಿಡುಗಡೆಗೊಳಿಸುವರು. ಮೋಕ್ಷಪತಿ ಶ್ರೀ, ಗುರುಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಶಿವಬಸವ ಶ್ರೀ, ಮಲ್ಲಿಕಾರ್ಜನ ಶ್ರೀ ದಂಪತಿಗಳಿಗೆ ಸನ್ಮಾನಿಸುವರು. ಸಿದ್ದಬಸವ ಕಬೀರ್ ಶ್ರೀ, ಡಾ.ಬಸವ ರಮಾನಂದ ಶ್ರೀ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಿದ್ದಾರೆ ಎಂದು ಹೇಳಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಡಿ.ಸುಧಾಕರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್‌ಖರ್ಗೆ, ಶರಣು ಪ್ರಕಾಶ್ ಪಾಟೀಲ್, ಆರ್.ಬಿ.ತಿಮ್ಮಾಪೂರ, ಮಾಜಿ ಎಂಎಲ್ಸಿ ಹನುಮಂತಯ್ಯ, ಧರ್ಮಸೇನ, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಸಂಸದ ಜನಾರ್ದನಸ್ವಾಮಿ, ತರೀಕೆರೆ ಶಾಸಕ ಸುರೇಶ್‌ಗೌಡ, ಚನ್ನಗಿರಿ ಮಾಜಿ ಶಾಸಕ ಶಿವಶಂಕರ್ ಸೇರಿ ವಿವಿಧ ಕ್ಷೇತ್ರದ ಗಣ್ಯರು, ಅಧಿಕಾರಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಿಎಸ್‌ಎಸ್ ಅಧ್ಯಕ್ಷ ಸಿ.ಎಚ್.ಮಂಜುನಾಥ್, ತಾಲೂಕು ಅಧ್ಯಕ್ಷ ವೀರಭದ್ರಪ್ಪ, ಗ್ರಾಪಂ ಸದಸ್ಯ ಕಣುಮಪ್ಪ
ಇದ್ದರು.