ಕಲ್ಯಾಣ ಕರ್ನಾಟಕದಲ್ಲಿ ರಿಮ್ಸ್ ಅತ್ಯುತ್ತಮ ಆಸ್ಪತ್ರೆಯಾಗಲಿದೆ: ಶಾಸಕ ಶಿವರಾಜ ಪಾಟೀಲ್

oplus_2
oplus_2
Published on

ರಾಯಚೂರು: ನಗರದ ರಿಮ್ಸ್ ಕಾಲೇಜು ಸಭಾಂಗಣದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯಗಳ ಮಿಷನ್(ಪಿಎಂ-ಎಬಿಎಚ್‌ಐಎಂ) ಯೋಜನೆಯಡಿ 21.85 ಕೋಟಿ ರೂ. ಅಂದಾಜು ವೆಚ್ಚದ 50 ಹಾಸಿಗೆಗಳ ತೀವ್ರ ನಿಗಾ ಘಟಕದ ಶುಂಕುಸ್ಥಾಪನೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ವರ್ಚ್ಯುವಲ್ ಮೂಲಕ ಮಂಗಳವಾರ ನೆರವೇರಿತು.

ಇದೇ ವೇಳೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿಗದಿತ ಕಾಲಾವಧಿಯಲ್ಲಿ ತಲುಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ರಿಮ್ಸ್ ಆಸ್ಪತ್ರೆ ಅತ್ಯುತ್ತಮ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಜಿಲ್ಲಾಡೆಳಿತದಿಂದ ಮಹತ್ವದ ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದರು.

ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಯೋಧರಂತೆ ಕಾರ್ಯನಿರ್ವಹಿಸಿದ್ದು, ಅವರ ಕಾರ್ಯ ಉತ್ತಮವಾಗಿತ್ತು. ವೈದ್ಯರಿಗೆ ಸಾರ್ಥಕ ಭಾವವೂ ಮೂಡಿತ್ತು. ಸಂಕಷ್ಟದ ಸಂದರ್ಭದಲ್ಲಿಯೂ ಎದೆಗುಂದದೆ ಸೇವೆ ಸಲ್ಲಿಸಿದ್ದಾರೆಂದು ಬಣ್ಣಿಸಿದರು.

ರಿಮ್ಸ್‌ನಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳೊಂದಿಗೆ ಉತ್ತಮ ಒಡನಾಟ ಹೊಂದಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ರಿಮ್ಸ್ ನಿರ್ದೇಶಕ ಡಾ.ರಮೇಶ, ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ, ಒಪೆಕ್ ವಿಶೇಷಾಧಿಕಾರಿ ಡಾ.ರಮೇಶ ಸಾಗರ, ವೈದ್ಯಕೀಯ ಅಧೀಕ್ಷಕ ಡಾ.ಬಾಸ್ಕರ, ಡಿಎಚ್‌ಒ ಡಾ.ಸುರೇಂದ್ರಬಾಬು, ರಿಮ್ಸ್ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಸವರಾಜ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net