ಕಲ್ಯಾಣ ಕರ್ನಾಟಕದ ಹೆಮ್ಮೆ ಖರ್ಗೆ

patil sanmna to kharge
Published on

ಹುಮನಾಬಾದ್: ರಾಜ್ಯಸಭೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ ಹೆಮ್ಮೆಯ ಮುತ್ಸದ್ಧಿ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದ್ದಾರೆ.

ಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಹಮ್ಮಿಕೊಂಡಿದ್ದ ಸಂಭ್ರಮೋತ್ಸವ ವೇಳೆ ಮಾತನಾಡಿದ ಅವರು, ಇಡೀ ದೇಶಕ್ಕೆ ಕಲ್ಯಾಣ ಕರ್ನಾಟಕವನ್ನು ಪರಿಚಯಿಸಿದ ಕೀರ್ತಿ ಖರ್ಗೆ ಅವರಿಗೆ ಸಲ್ಲುತ್ತದೆ. ಲೋಕಸಭೆ ಕಾಂಗ್ರೆಸ್ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡಿದ್ದ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಒಲಿದಿರುವುದು ಖುಷಿ ತಂದಿದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಜತೆಯಲ್ಲಿ ರಾಜ್ಯಸಭೆ ಘನತೆ ಸಹ ಅವರು ಹೆಚ್ಚಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖರ್ಗೆ ಅವರು ಅಭಿವೃದ್ಧಿ ಚಿಂತನೆಯುಳ್ಳ ಅಪರೂಪದ ಮುಖಂಡರು. ಅಭಿವೃದ್ಧಿ ವಿಷಯ ಬಂದಾಗ ರಾಜಕೀಯ ಬದಿಗೊತ್ತಿ ಕೆಲಸ ಮಾಡುವ ಅವರ ಸ್ವಭಾವ ಮಾದರಿ. ಅವರ ನಾಯಕತ್ವದಲ್ಲಿ ಈ ಭಾಗ ಕಂಡಿರುವ ಅಭಿವೃದ್ಧಿ ಅವರ್ಣನೀಯ. ಐದು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳು ಕಂಡರೂ ಈ ಭಾಗ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ್, ಪ್ರಮುಖರಾದ ಅಫ್ಸರ್ಮಿಯಾ, ಮಹಾಂತಯ್ಯ ತೀರ್ಥಾ, ಓಂಪ್ರಕಾಶ ಅಗಡಿ, ಉಮೇಶ ಜಂಬಗಿ, ಡಿ.ಎಂ. ನಂದಿ, ಘಾವಳಕರ್, ಧರ್ಮರೆಡ್ಡಿ, ಖಾಜ್ ಪಟೇಲ್, ನರಸಪ್ಪ ಇತರರಿದ್ದರು.

ಸತ್ಕಾರ: ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಹಿರಿಯ ಕಾಂಗ್ರೆಸ್ ನೇತಾರ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಶಾಸಕ ರಾಜಶೇಖರ ಪಾಟೀಲ್ ಸತ್ಕರಿಸಿದರು. ಮಾಜಿ ಸಚಿವ ಪ್ರಿಯಾಂಕ ಖರ್ಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net