

ಜಯತೀರ್ಥ ಪಾಟೀಲ ಕಲಬುರಗಿ
ಬಾಹ್ಯಾಕಾಶ, ರಕ್ಷಣೆ, ಇಂಧನ, ಸಂಪರ್ಕ ಸೇರಿ ಇತರೆ ಪ್ರಮುಖ ಕ್ಷೇತ್ರದ ಬಲವರ್ಧನೆ ಹಿನ್ನೆಲೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಬೇಕಿದ್ದ ಸೆಂಟರ್ ಆಫ್ ಎಕ್ಸ್ಲನ್ಸ್ ಕೇಂದ್ರವನ್ನು ದಿಢೀರ್ನೆ ಬೆಂಗಳೂರಿಗೆ ಸ್ಥಳಾಂತರಿಸುವ ಮೂಲಕ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ಆಘಾತ ನೀಡಿರುವುದು ಬೆಳಕಿಗೆ ಬಂದಿದೆ.
ಸರಿ ಸುಮಾರು 500ಕ್ಕೂ ಹೆಚ್ಚು ಎಕರೆ ಪ್ರದೇಶ ಜಮೀನು ಹೊಂದಿರುವ ಕಲಬುರಗಿಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೇ ಸೆಂಟರ್ ಆಫ್ ಎಕ್ಸ್ಲನ್ಸ್ ಸ್ಥಾಪನೆಯಾಗಬೇಕೆಂಬುದು ಬೇಡಿಕೆ ಜತೆಗೆ ಪ್ರಸ್ತಾವನೆಯೂ ಇತ್ತು. ಆದರೆ ರಾಜ್ಯದ ರಾಜಧಾನಿಯೂ ಆಗಿರುವ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಿಗೆ ಕೌಶಲ ಆಧಾರಿತ ಸಂಶೋಧನೆಗೆ ಅನುಕೂಲವಾಗಲಿದೆ ಎಂಬ ನೆಪದೊಂದಿಗೆ ಕಲಬುರಗಿ ಸಿಯುಕೆ ಹೆಸರಿನ ಮೇಲೆ ಬೆಂಗಳೂರಿನಲ್ಲಿ ಈ ಕೇಂದ್ರ ಸ್ಥಾಪಿಸಲು ನಿರ್ಧರಿಸಿರುವುದು ಕಲ್ಯಾಣ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವೈರ್ಲೈಸ್, ಮೈಕ್ರೋವೇವ್ಸ್ ಮತ್ತು ಫೋಟೊನಿಕ್ಸ್ನಲ್ಲಿ ಸೆಂಟರ್ ಆಫ್ ಎಕ್ಸ್ಲನ್ಸ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್, ಎಸ್ಎಎಂಇಆರ್, ಸಿಡಿಓಟಿ, ಸಿಡಿಎಸಿ, ಸಿಆರ್ಎಲ್ ಸೇರಿ ಅನೇಕ ಪ್ರತಿಷ್ಠಿತ ಸಂಸ್ಥೆಗಳ ಸೇವೆ ವಿನಿಮಯ ಮಾಡಿಕೊಳ್ಳಲು ಈ ಮೂಲಕ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 10 ಎಕರೆ ಜಮೀನು ಈ ಕೇಂದ್ರ ಸ್ಥಾಪನೆಗೆ ಒದಗಿಸಲಾಗಿದೆ. ಜಮೀನು ನೀಡಲು ಮೊದಲು ನಿರಾಕರಿಸಿದ್ದ ಬೆಂಗಳೂರು ವಿವಿ ಆ ನಂತರ ಒತ್ತಡಕ್ಕೆ ಮಣಿದು ಜಾಗ ಒದಗಿಸಿದೆ.
ವಿವಿ ಹೆಸರಿನ ಮೇಲೆ ಸಾಲ
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹೆಸರಿನ ಮೇಲೆ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (ಹೈಯರ್ ಎಜ್ಯುಕೇಶನ್ ಫಂಡಿಂಗ್ ಏಜೆನ್ಸಿ) ಮೂಲಕ 100 ಕೋಟಿ ರೂ. ಸಾಲ ಪಡೆದುಕೊಳ್ಳಲು ಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರದ ಸಾಲವನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಮರು ಪಾವತಿಸಬೇಕಿದೆ.
ಪ್ರಸ್ತಾವನೆಗೆ ವಿರೋಧ
ಆದರೆ 2020ನೇ ಸೆಪ್ಟೆಂಬರ್ನಲ್ಲಿ ಕೇಂದ್ರೀಯ ವಿವಿಯಲ್ಲಿ ಜರುಗಿದ ಹಣಕಾಸು ಕಮಿಟಿ ಸಭೆಯಲ್ಲಿ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿತ್ತು. ಜತೆಗೆ ಹೆಫಾ ಮೂಲಕ ಸಾಲ ರೂಪದಲ್ಲಿ ಅನುದಾನ ಪಡೆದುಕೊಳ್ಳವುದನ್ನು ಕೈಬಿಟ್ಟು ವಿಶೇಷ ಅಭಿವೃದ್ಧಿ ಪ್ಯಾಕೇಜ್ ಅಡಿ ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಮೂಲಕ ಅನುದಾನ ಪಡೆದುಕೊಳ್ಳಬೇಕು ಎಂಬ ಸಲಹೆಗಳೂ ಕೇಳಿಬಂದಿದ್ದವು.
ವಿವಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆಯಲ್ಲೂ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ ಸಿಯುಕೆ ಅಡಿ ಸ್ಥಾಪನೆಯಾಗಲಿರುವ ಸೆಂಟರ್ ಆಫ್ ಎಕ್ಸಲನ್ಸ್ ಕೇಂದ್ರವನ್ನು ಬೆಂಗಳೂರಿಗೆ ಬಿಟ್ಟುಕೊಡಬಾರದು. ವಿವಿ ಪ್ರಧಾನ ಕ್ಯಾಂಪಸ್ನಲ್ಲೇ ಈ ಕೇಂದ್ರ ಸ್ಥಾಪನೆಯಾಗಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.
ಎಚ್ಚೆತ್ತುಕೊಳ್ಳಲಿ
ಈಗಲಾದರೂ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ಆಹಾರ ಸುರಕ್ಷತಾ ಪ್ರಾದೇಶಿಕ ಕಚೇರಿ, ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮದ ಪ್ರಾದೇಶಿಕ ಕಚೇರಿ ಬೇರೆಡೆ ಸ್ಥಳಾಂತರಿಸಿದಾಗಲು ಜನಪ್ರತಿನಿಧಿಗಳು ಬಾಯಿ ಬಿಡಲಿಲ್ಲ. ಇದೀಗ ಕಲಬುರಗಿ ಸೆಂಟ್ರಲ್ ವಿವಿಯಲ್ಲಿ ಸ್ಥಾಪನೆಯಾಗಬೇಕಿದ್ದ ಸೆಂಟರ್ ಆಫ್ ಎಕ್ಸ್ಲನ್ಸ್ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ. ಜನಪ್ರತಿನಿಧಿಗಳು ಈಗಲಾದರೂ ಕಲ್ಯಾಣ ಕನರ್ಾಟಕದ ಧ್ವನಿಯಾಗಬೇಕು.