ಕಲ್ಯಾಣ ಕರ್ನಾಟಕಕ್ಕೆ ಕರೊನಾ ಕೊಳ್ಳಿ

B SHARAT DC Photo
Published on

ವಾದಿರಾಜ ವ್ಯಾಸಮುದ್ರ ಕಲಬುರಗಿ: ಕಲ್ಯಾಣ ಕರ್ನಾಟಕ ಮೇಲೆ ಕರೊನಾ ಕಾರ್ಮೋಡ ಕವಿದಿದೆ. ಈ ಭಾಗದ ಆರು ಜಿಲ್ಲೆಗಳಲ್ಲಿ ರಣಕೇಕೆ ಹಾಕಿರುವ ಮಹಾಮಾರಿ ಈಗಾಗಲೇ ಇಬ್ಬರನ್ನು ಬಲಿ ಪಡೆದಿದ್ದು, 18 ಜನ ಸೋಂಕಿನಿಂದ ಬಳಲುತ್ತಿದ್ದಾರೆ. ಇಲ್ಲಿ ಕರೊನಾ ಚಾಚಿರುವ ಕೆನ್ನಾಲಿಗೆ ಜನರಲ್ಲಿ ಭೀತಿ ಮೂಡಿಸಿದ್ದಲ್ಲದೆ ನೆಮ್ಮದಿ ಜೀವನಕ್ಕೂ ಕೊಳ್ಳಿ ಇಟ್ಟಿದೆ.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಕರೊನಾ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿವೆ. ಬಡವರ, ನಿರ್ಗತಿಕರ, ಭಿಕ್ಷುಕರ, ಕಾರ್ಮಿಕರ, ಕೂಲಿಕಾರರ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರ ಅದೆಷ್ಟೇ ಕ್ರಮ ಕೈಗೊಳ್ಳುತ್ತಿದ್ದರೂ, ಅದೇನೆ ಭರವಸೆ ನೀಡುತ್ತಿದ್ದರೂ ಹಲವಾರು ಕುಟುಂಬಗಳು ಒಂದ್ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್(ಮಸೀದಿ)ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆ ಕಲ್ಯಾಣ ಕರ್ನಾಟಕದಲ್ಲಿ ಕರೊನಾ ಬೆಂಕಿ ಕಿಡಿ ಹೊತ್ತಿಸಿದೆ. ಈ ಸಭೆಯಲ್ಲಿ ಪಾಲ್ಗೊಂಡ ಹೆಚ್ಚಿನವರಿಗೆ ಸೋಂಕು ತಗುಲುತ್ತಿದೆ. ಹೀಗೆ ಸೋಂಕು ತಗುಲಿದವರಲ್ಲಿ 10 ಜನ ಬೀದರ್ ಮತ್ತು ಕಲಬುರಗಿ ಜಿಲ್ಲೆ ಒಬ್ಬರು ಸೇರಿದ್ದಾರೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೀದರ್ ಮತ್ತು ಕಲಬುರಗಿಯಲ್ಲಿ ಕರೊನಾ ಕ್ರೌರ್ಯದ ರುದ್ರನರ್ತನ ನಡೆದಿದೆ.
ಈ ಮಧ್ಯೆ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡಿದ್ದ ಕಲಬುರಗಿ ಜಿಲ್ಲೆಯ ಎಲ್ಲ 26 ಮತ್ತು ಬೀದರ್ ಜಿಲ್ಲೆಯ ಇತರೆ 17 ಜನರ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತರಿಸಿದೆ. ದೇಶದಲ್ಲೇ ಕರೊನಾದಿಂದ ಮೊದಲ ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಇದಾದ ನಂತರ ಬೀದರ್ ಜಿಲ್ಲೆಯವರೊಬ್ಬರು ಬಲಿಯಾಗಿರುವ ಬಗ್ಗೆ ಶಂಕಿಸಿದ್ದು, ಮೃತರ ಸಂಖ್ಯೆ ಎರಡಕ್ಕೇರಿದೆ. ಇಡೀ ರಾಜ್ಯದಲ್ಲಿ ಕರೊನಾಕ್ಕೆ ಮೃತಪಟ್ಟಿದ್ದೇ ಮೂವರು. ಅದರಲ್ಲಿ ಇಬ್ಬರು ಕಲ್ಯಾಣ ಕರ್ನಾಟಕದವರು ಇರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕಲಬುರಗಿಯಲ್ಲಿ ಅನೇಕ ದಿನ ಕೇವಲ ಮೂರೇ ಪ್ರಕರಣ ಇದ್ದವು. ಇನ್ನೇನು ಹೆಮ್ಮಾರಿ ಹತೋಟಿಗೆ ಬಂದಿತು ಎನ್ನುವಷ್ಟರಲ್ಲಿ ಮತ್ತೆರಡು ಪ್ರಕರಣ ಧುತ್ತೆಂದು ಎರಗಿಬಂದವು. ಇದರಲ್ಲಿ ಒಂದು ಕಲಬುರಗಿಯದ್ದಾದರೆ, ಇನ್ನೊಂದು ಶಹಾಬಾದ್ ಪಟ್ಟಣಕ್ಕೆ ಸೇರಿದ್ದು. ಬಳ್ಳಾರಿ ಜಿಲ್ಲೆಯಲ್ಲೂ ಪಾಸಿಟಿವ್ ಪ್ರಕರಣ ಲಗ್ಗೆ ಇಟ್ಟಿದ್ದು, ಹೊಸಪೇಟೆಯಲ್ಲಿ 3 ಮತ್ತು ಸಿರಗುಪ್ಪದಲ್ಲಿ ಒಂದು ಪ್ರಕರಣ ದೃಢಪಟ್ಟಿವೆ.
ಕಲಬುರಗಿಯಲ್ಲಿ ಐವರು ಸೋಂಕಿತರ ಪೈಕಿ ಒಬ್ಬ ವೃದ್ಧನ ಸಾವು ಸಂಭವಿಸಿದ ನಂತರ ವೈದ್ಯ ಸೇರಿ ಇಬ್ಬರು ಗುಣಮುಖರಾಗಿ ಮನೆ ಸೇರಿದ್ದಾರೆ. ಇಎಸ್ಐ ಆಸ್ಪತ್ರೆ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನಿಬ್ಬರು ಸೋಂಕಿತರ ಆರೋಗ್ಯವೂ ಸುಧಾರಿಸಿದೆ.
ಸದ್ಯದ ಸ್ಥಿತಿಯಲ್ಲಿ ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಸೇಫ್ ಝೋನ್ನಲ್ಲಿವೆ. ಕರೊನಾ ತಮಗೆ ತಟ್ಟದಿರಲಿ ಎಂದು ಅಲ್ಲಿನ ಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಮಹಿಳೆಗೆ ಹೇಗೆ ಬಂತು?
ಈ ಭಾಗದ ಎಲ್ಲ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಶಹಾಬಾದ್ನ ಸೋಂಕಿತ ಮಹಿಳೆ ಯಾರ ಸಂಪರ್ಕದಲ್ಲಿ ಇರಲಿಲ್ಲ. ಆದರೂ ಅದ್ಹೇಗೆ ವೈರಸ್ ತಗುಲಿತು ಎಂಬುದು ಸಾಕಷ್ಟು ಚರ್ಚೆ , ಕುತೂಹಲ ಮೂಡಿಸಿದೆ. ಈಕೆ ಕುಟುಂಬದ ವ್ಯಕ್ತಿ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡು ಬಂದಿದ್ದ. ಆತನಿಂದಲೇ ಈಕೆಗೂ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಆದರೆ ಆತ ಗುಣಮುಖನಾಗಿದ್ದಾನೆ.

ರಾತೋರಾತ್ರಿ ಡೇಂಜರ್
ಝೋನ್ ಸೇರಿದ ಬೀದರ್
ಕರೊನಾ ಸೋಂಕು ತಾಂಡವವಾಡಿದ ನಂತರವೂ ಕಲಬುರಗಿ ಜಿಲ್ಲೆಯಲ್ಲಿ ಕರಾಳ ದಿನಗಳಿದ್ದಾಗಲೂ ಬೀದರ್ ಜಿಲ್ಲೆ ನೆಮ್ಮದಿಯಿಂದ ಇತ್ತು. ಮುಂಜಾಗ್ರತಾ ಕ್ರಮವಾಗಿ ಅಲ್ಲಿಯ ಜಿಲ್ಲಾಧಿಕಾರಿ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಆದರೆ ಗುರುವಾರ ಸೂರ್ಯೋದಯದ ಹೊತ್ತಿಗೆ ಪರಿಸ್ಥಿತಿ ಬದಲಾಯಿತು. ತಬ್ಲಿಘಿ ಸಭೆ ಮುಗಿಸಿ ಬಂದಿದ್ದವರ ಪೈಕಿ 10 ಜನರಲ್ಲಿ ಕರೊನಾ ಸೋಂಕು ಖಚಿತವಾಗುತ್ತಿದ್ದಂತೆ ಬೀದರ್ ಜಿಲ್ಲೆಯನ್ನು ಡೇಂಜರ್ ಝೋನ್ಗೆ ತಂದು ನಿಲ್ಲಿಸಿದೆ. ಆದರೆ ಇನ್ನುಳಿದ 17 ಜನರ ವರದಿ ನೆಗೆಟಿವ್ ಬಂದಿರುವುದು ಒಂದಿಷ್ಟು ಸಮಾಧಾನ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net