ಕಲ್ಪಿತ ಸಂಸತ್ ಸ್ಪರ್ಧೆ -ಮೇಘನಾ, ಗಾಯತ್ರಿ ರಾಜ್ಯ ಮಟ್ಟಕ್ಕೆ ಆಯ್ಕೆ -ದಾಕ್ಷಾಯಿಣಿಗೆ ತೃತೀಯ ಸ್ಥಾನ

pixlr_20231118065050771.jpg
Published on

ದಾವಣಗೆರೆ: ಜಿಲ್ಲಾ ಮಟ್ಟದ ಕಲ್ಪಿತ ಯುವ ಸಂಸತ್ ಸ್ಪರ್ಧೆಯಲ್ಲಿ ಉತ್ತಮ ವಾಕ್‌ಪಟುತ್ವಕ್ಕಾಗಿ ದಾವಣಗೆರೆ ಉತ್ತರ ವಲಯದ ಮೆಳ್ಳೇಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಬಿ.ಟಿ.ಮೇಘನಾ ಪ್ರಥಮ ಹಾಗೂ ಹರಿಹರ ತಾಲೂಕು ತಂಡದ ಹಾಲಿವಾಣ ಸರ್ಕಾರಿ ಶಾಲೆಯ ಕೆ.ಎಂ.ಗಾಯತ್ರಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಇದರೊಂದಿಗೆ ಗದಗನಲ್ಲಿ ಡಿ. 25ರಂದು ನಡೆಯಲಿರುವ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಷಯ ಪರಿವೀಕ್ಷಕಿ ಎಂ. ಶಶಿಕಲಾ ತಿಳಿಸಿದ್ದಾರೆ. ಮೆಳ್ಳೇಕಟ್ಟೆ ಶಾಲೆಯ ವಿದ್ಯಾರ್ಥಿಗಳು ಸತತ ಹತ್ತನೇ ವರ್ಷವೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಜಿಲ್ಲಾ ಸ್ಪರ್ಧೆಯಲ್ಲಿ ಹೊನ್ನಾಳಿ ತಾಲೂಕಿನ ಜೀನಹಳ್ಳಿ ಸರ್ಕಾರಿ ಶಾಲೆಯ ಎನ್. ದಾಕ್ಷಾಯಿಣಿ ತೃತೀಯ ಬಹುಮಾನ ಪಡೆದಿದ್ದಾರೆ. ಮೆಳ್ಳೇಕಟ್ಟೆ ಶಾಲೆಯ ಎ.ಆರ್.ಚಂದನಾ, ಬಿ.ಎನ್. ಧನುಷ್ ಹಾಗೂ ಜೀನಹಳ್ಳಿ ಸರ್ಕಾರಿ ಶಾಲೆಯ ಎಸ್. ಲಾವಣ್ಯ ಸಮಾಧಾನಕರ ಬಹುಮಾನ ಪಡೆದರು.

ಜಿಲ್ಲೆಯ ಐದು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಚನ್ನಗಿರಿ ತಾಲೂಕು ತಂಡ ಗೈರಾಗಿತ್ತು. ತಲೆಗೆ ಟೋಪಿ, ಕೊರಳಿಗೆ ಶಲ್ಯ ಧರಿಸಿದ್ದ ಶ್ವೇತ ವಸ್ತ್ರಧಾರಿಗಳು, ಕೆಲವರಿಗೆ ಕುರ್ತಾದ ಆಕರ್ಷಣೆ, ಸ್ಪೀಕರ್ ಹೊಂದಿದ್ದ ಹೆಡ್‌ಫೋನ್, ಜನಪ್ರತಿನಿಧಿಗಳಂತೆ ಕಡತಗಳನ್ನಿಡಿದು ಭಾಗವಹಿಸಿದ್ದ ಮಕ್ಕಳು ಅರಳು ಹುರಿದಂತೆ ಮಾತನಾಡಿದರು. ಪ್ರಶ್ನಿಸುವ ಮತ್ತು ಥಟ್ಟನೇ ಉತ್ತರಿಸುವ ವೈಖರಿ, ಸಭಾ ಗಾಂಭೀರ್ಯ ಎಲ್ಲವೂ ಗಮನ ಸೆಳೆದವು. ಕೆಲ ಮಕ್ಕಳು ಸಭಾ ಕಂಪನದಿಂದ ಮಾತನಾಡಲು ತಡವರಿಸಿದ್ದು ಕಂಡುಬಂತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಜಿ. ಕೊಟ್ರೇಶ್, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಹೇಗೆ ಕಾರ್ಯ ನಿರ್ವಹಿಸಬೇಕೆಂಬುದನ್ನು ಪ್ರತಿಬಿಂಬಿಸುವುದೇ ಯುವ ಕಲ್ಪತ ಸಂಸತ್ ಸ್ಪರ್ಧೆಯಾಗಿದೆ. ಜನಪ್ರತಿನಿಧಿಗಳನ್ನು ಸಿದ್ಧಗೊಳಿಸಲು ಈ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕರಾದ ಎಂ. ಶಶಿಕಲಾ, ಆರ್.ಬಿ.ವಸಂತಕುಮಾರಿ ಇದ್ದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಮಂಜುನಾಥ ಐರಣಿ, ಕೆ.ಸಿ.ಪ್ರಭು, ಸಿ.ಆರ್. ಕರಿಯಪ್ಪ ತೀರ್ಪುಗಾರರಾಗಿ ಭಾಗವಹಿಸಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net