

ಮೈಸೂರು: ನಗರದ ಲಕ್ಷ್ಮೀಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಗರ ಹಾಗೂ ತಾಲೂಕು ಮಟ್ಟದ ಕಲ್ಪಿತ ಯುವ ಸಂಸತ್ ಸ್ಪರ್ಧೆ ಗುರುವಾರ ನಡೆಯಿತು.
ತಿ.ನರಸೀಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೂ ಆದ ಜಿಲ್ಲಾ ಯುವ ಸಂಸತ್ ನೋಡಲ್ ಅಧಿಕಾರಿ ಡಾ.ಮಂಗಳಮೂರ್ತಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಆದ್ಯತೆ. 2019ರಿಂದ ಎಲ್ಲ ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಮತದಾರರ ಅರಿವು ಹಾಗೂ ಯುವ ಕಲ್ಪಿತ ಸಂಸತ್ ಏರ್ಪಡಿಸುತ್ತಿರುವುದು ಅರ್ಥಪೂರ್ಣ ಎಂದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಉತ್ತಮ ಅಡಿಪಾಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಬಹಳ ಮುಖ್ಯವಾದುದು. ಇದನ್ನು ಅರಿತು ಕಾರ್ಯಕಲಾಪಗಳನ್ನು ಸಂಸತ್ತಿನಲ್ಲಿ ನಡೆಸಿದಾಗ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಂಶುಪಾಲ ಎನ್.ಎಂ.ಸುರೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ಈ ಹಕ್ಕನ್ನು ಯಾರೂ ಹಣಕ್ಕಾಗಲಿ, ಯಾವುದೇ ಆಮಿಷಕ್ಕಾಗಲಿ ದುರುಪಯೋಗಪಡಿಸಿಕೊಳ್ಳಬಾರದು. ನಿಮ್ಮ ಅಮೂಲ್ಯವಾದ ಮತವನ್ನು ಕಡ್ಡಾಯವಾಗಿ ಚಲಾಯಿಸಿ, ಮತದಾನ ಹೆಚ್ಚು ಮಾಡಿಸಬೇಕೆಂದು ಸಲಹೆ ನೀಡಿದರು.
ಉಪನ್ಯಾಸಕ ಎನ್.ಎಸ್.ಪಶುಪತಿ ಮಾತನಾಡಿ, ಮೊಬೈಲ್, ಸಾಮಾಜಿಕ ಜಾಲ ತಾಣಗಳತ್ತ ತ್ವರಿತ ಗತಿಯ ಮಾಧ್ಯಮಗಳಿಗೆ ಜೋತು ಬಿದ್ದು ದೇಶದ ಪ್ರಗತಿ ಮರೆಯುತ್ತಿದ್ದೇವೆ, ಅದು ನಿಲ್ಲಬೇಕು. ಎಲ್ಲರೂ ಜಾಗೃತರಾಗಿ ದೇಶವನ್ನು ಮುನ್ನಡೆಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು
ಉಪನ್ಯಾಸರಕಾದ ಲೋಕೇಶ್, ಶಶಿಕಲಾ, ಶ್ರೀನಿವಾಸ, ಶಶಿಕಲಾ ತೀರ್ಪುಗಾರರಾಗಿದ್ದರು. ಉಪನ್ಯಾಸಕರಾದ ಜಗದೀಶ್, ಮಂಜುಳಾ, ಮಹದೇವ ನಾಯಕ್, ಪುಷ್ಪಾ ಭಾಗವಹಿಸಿದ್ದರು. ಮೈಸೂರು ನಗರ ಮತ್ತು ತಾಲೂಕಿನಿಂದ 46 ಕಾಲೇಜುಗಳಿಂದ 81 ವಿದ್ಯಾರ್ಥಿಗಳು ಯುವ ಅಣಕು ಸಂಸತ್‌ನಲ್ಲಿ ಪಾಲ್ಗೊಂಡಿದ್ದರು.