

ಗುಳೇದಗುಡ್ಡ: ಸರ್ಕಾರ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ಜನಪದ ಕಲೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಸಾಹಿತ್ಯ, ಭಾಷೆ ಶ್ರೀಮಂತಿಕೆಗೆ ಜನಪದ ಭದ್ರಬುನಾದಿ ಹಾಕಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.
ಸಮೀಪದ ಕೋಟೆಕಲ್ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಬಾಗಲಕೋಟೆ ಹಾಗೂ ಗುಳೇದಗುಡ್ಡ ತಾಲೂಕು ಘಟಕ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಈ ನಾಡಿನ ಶ್ರೀಮಂತ ಕಲೆಯಾಗಿದೆ. ಜನಪದಕ್ಕೆ ಶ್ರೀಮಂತ- ಬಡವ ಭೇದಭಾವ ಎಂಬುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲೆ ತನ್ನದೇಯಾದ ವಿಶೇಷತೆ ಹೊಂದಿದೆ. ಸರ್ಕಾರ ಕಲಾವಿದರಿಗೆ ಸೂಕ್ತ ಮಾಸಾಶನ ನೀಡುವ ಮೂಲಕ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಶಿವಪ್ಪ ಕಲ್ಬುರ್ಗಿ ಮಾತನಾಡಿ, ನಾಟಕ, ರಂಗಕಲೆ, ಜನಪದ ಹೀಗೆ ಎಲ್ಲ ಪ್ರಕಾರಗಳಲ್ಲಿ ಕಲಾವಿದರು ಗುಳೇದಗುಡ್ಡ ಭಾಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಕಲಾವಿದರು ಬಡವರಿರುತ್ತಾರೆ, ಅವರ ಜೀವನಕ್ಕೆ ಈಗ ನೀಡುವ ಮಾಸಾಶನ ಸಾಕಾಗುತ್ತಿಲ್ಲ. ಮಾಸಾಶನವನ್ನು 5 ಸಾವಿರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಬಾಲಾಜಿ, ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ, ಜೆಡಿಎಸ್ ಮುಖಂಡ ಚಂದ್ರಕಾಂತ, ಮುಖಂಡರಾದ ಮಹಾಂತೇಶ ಮಮದಾಪುರ, ರಾಜು ಚಿಮ್ಮನಕಟ್ಟಿ ಮಾತನಾಡಿದರು.
ಬೈಲಾಟ ಕಲಾವಿದ ಶ್ರೀಕಾಂತ ಹುನಗುಂದ ಅವರು ಆಕರ್ಷಕ ದಕ್ಷ ಯಜ್ಞ ಪ್ರದರ್ಶನ ನೀಡಿದರು. ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ರಾಜನಾಳ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಶಾಂತಾ ಕರಡಿಗುಡ್ಡ, ಡಾ.ಮೌನೇಶ ಕಮ್ಮಾರ, ಚಿದಾನಂದಸಾ ಕಾಟವಾ, ಸುರೇಶ ವಗ್ಗಾ, ಜಿ.ಕೆ.ತಳವಾರ, ಕೆ.ಎಸ್.ಕಟಗಿ, ಹುಚ್ಚೇಶ ಯಂಡಿಗೇರಿ, ಸಂಗಮೇಶ ಚಿಕ್ಕಾಡಿ, ಡ್ಯಾನಿಯಲ್ ಕರಡಿಗುಡ್ಡ, ಶಶಿಕಲಾ ಭಾವಿ, ಚಂದ್ರಶೇಖರ ಹೆಗಡೆ, ಮೋಹನ ಕರನಂದಿ, ಶಂಕರ ಮುಂದಿನಮನಿ, ಪವಿತ್ರಾ ಜಕ್ಕಪ್ಪನವರ, ಅನಿಲ ರಾವಳ ಇತರರಿದ್ದರು.