ಕಲೆಗಳು ಸಂಸ್ಕೃತಿಯ ಪ್ರತಿಬಿಂಬ ಗಮಕ

CTD 10 Gamaka - ---004
Published on


ಚಿತ್ರದುರ್ಗ: ಕಲೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಸದಾ ಪ್ರದರ್ಶಿತವಾದಾಗ ಮಾತ್ರ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಗಮಕವೂ ಒಂದು ಎಂದು ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.
ಚಿತ್ರದುರ್ಗ ಗಮಕ ಕಲಾಭಿಮಾನಿಗಳ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಗಾಯತ್ರಿ ಕಲ್ಯಾಣ ಮಂಟಪದ ಶಾರದಾ ಸಭಾ ಭವನದಲ್ಲಿ ಗುರುವಾರ ಹಮಿಕೊಂಡಿದ್ದ ಗಮಕ ಕಾವ್ಯ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ ಪ್ರೋತ್ಸಾಹಿಸುವ ಸಲುವಾಗಿ ನಮ್ಮ ಶ್ರೀಮಠದಿಂದ ಪ್ರತಿವರ್ಷ ನಡೆಯುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಗಮಕ ಕಲೆಗೂ ಆದ್ಯತೆ ನೀಡಲಾಗುವುದು ಎಂದರು.
ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ ಮಾತನಾಡಿ, ಕಳೆದ 4 ದಶಕಗಳಿಂದ ಚಿತ್ರದುರ್ಗದಲ್ಲಿ ಗಮಕ ಕಲೆಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಲೆ ಉಳಿಸಿ, ಬೆಳೆಸುವ ಸಲುವಾಗಿ ಇನ್ನು ಮುಂದೆ ಪ್ರತಿ ತಿಂಗಳಿಗೊಮ್ಮೆ ನಡೆಸಲು ತೀರ್ಮಾನಿಸಲಾಗಿದೆ. ಜೆಸಿಆರ್ ಬಡಾವಣೆಯ ಗಣಪತಿ ದೇಗುಲದಲ್ಲಿ ಮುಂದಿನ ತಿಂಗಳು ನಡೆಯಲಿದೆ ಎಂದು ಹೇಳಿದರು.
ಕರ್ನಾಟಕ ಭಾರತ ಕಥಾಮಂಜರಿಯ ವಿಶ್ವರೂಪ ದರ್ಶನ ಕಥಾ ಭಾಗದ ವಾಚನ ಮತ್ತು ವ್ಯಾಖ್ಯಾನವನ್ನು ಸ್ವರಾತ್ಮಿಕ ಸಂಗೀತ ಶಾಲೆಯ ಪ್ರಾಚಾರ್ಯೆ ಗಮಕಿ ಚಂಪಕಾ ಶ್ರೀಧರ್ ವಾಚಿಸಿದರು. ಸಾಗರದ ನಿವೃತ್ತ ಪ್ರೊಫೆಸರ್ ಶ್ರೀಕೃಷ್ಣಯ್ಯ ವ್ಯಾಖ್ಯಾನ ನಡೆಸಿಕೊಟ್ಟರು.
ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಪ್ರತಿನಿಧಿ ಡಾ.ರಾಜೀವಲೋಚನ, ಸಂಘದ ನಿರ್ದೇಶಕ ನಂಜುಂಡರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net