

ಚಿತ್ರದುರ್ಗ: ಸಂಗೀತ, ನೃತ್ಯ, ರೂಪಕ, ನಾಟಕ ಸೇರಿ ಇನ್ನಿತರೆ ಅನೇಕ ಕಲೆಗಳು ನಾಗರಿಕತೆಯ ಪ್ರತಿಬಿಂಬವಾಗಿವೆ. ಇದರಲ್ಲಿ ಸಕ್ರಿಯವಾಗಿ ತೊಡಗುವ ಪ್ರತಿಯೊಬ್ಬರು ಮುಂದೆ ಸಮಾಜದ ಉತ್ತಮ ಪ್ರತಿನಿಧಿಯಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಸಲಹೆ ನೀಡಿದರು.
ಜಿಲ್ಲೆಯ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸಂಸ್ಥಾಪಕ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರುದಾಸ್ ಜೀ ಸ್ವಾಮೀಜಿ ಅವರ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರ ನಡೆದ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದಲ್ಲಿ ಮಾತನಾಡಿದರು.
ಕಲೆಗಳು ಸದಾ ಜೀವಂತ. ಇದಕ್ಕೆ ಮನುಷ್ಯರ ನೋವುಗಳನ್ನು ಕಡಿಮೆಗೊಳಿಸಿ, ಸಂತೋಷವನ್ನು ಹೆಚ್ಚಿಸುವ ಶಕ್ತಿ ಹೊಂದಿವೆ. ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ಅಗತ್ಯವಿದೆ ಎಂದರು.
ದಾವಣಗೆರೆ ವಿವಿ ಕುಲಸಚಿವ ಸಿ.ಕೆ.ರಮೇಶ್ ಮಾತನಾಡಿ, ಮಲ್ಲಾಡಿಹಳ್ಳಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಜಗತ್ಪ್ರಸಿದ್ಧ ಖ್ಯಾತಿ ಗಳಿಸಿದ ರಾಘವೇಂದ್ರ ಸ್ವಾಮೀಜಿ ಅವರ ಸಾಧನೆ ಅದ್ವಿತೀಯ ಎಂದು ಬಣ್ಣಿಸಿದರು.
ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ, ಇಲ್ಲಿ ನಡೆಯುವ ನಾಟಕೋತ್ಸವ ಮಕ್ಕಳಿಗೆ, ಸುತ್ತಮುತ್ತಲಿನ ಜನರಿಗೆ ಮನರಂಜನೆ ಮಾತ್ರವಲ್ಲ. ಕಲಾ ಜೀವಂತಿಕೆಯ ಸಂಕೇತವಾಗಿದೆ ಎಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿ ಅವರ ಸಾಧನೆ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ಈ ಗ್ರಾಮ ಮತ್ತು ಅನಾಥಸೇವಾಶ್ರಮದ ಅಭಿವೃದ್ಧಿಗೆ ಸದಾ ಬದ್ಧ ಎಂದು ಭರವಸೆ ನೀಡಿದರು.
ಇದೇ ವೇಳೆ ಆಶ್ರಮದ ವಿದ್ಯಾರ್ಥಿ ಝೀನಂ ಬರೆದ ಆಂಗ್ಲಭಾಷಾ ವ್ಯಾಕರಣವನ್ನು ಬಿಡುಗಡೆ ಮಾಡಲಾಯಿತು. ಗಣಪತಿ ಹೆಗಡೆ ನಿರ್ದೇಶನ, ಕಂದಗಲ್ ಹನುಮಂತರಾಯ ರಚಿತ ರಕ್ತರಾತ್ರಿ ನಾಟಕವನ್ನು ಸಿದ್ಧಾಪುರದ ರಂಗಸೌಗಂಧ ತಂಡದ ಕಲಾವಿದರು ಪ್ರದರ್ಶಿಸಿದರು.
ಮಲ್ಲಾಡಿಹಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ ನಾಗರಾಜ್, ರಂಗಸೌಗಂಧ ಕಲಾ ತಂಡದ ರಂಗ ನಿರ್ದೇಶಕ ಗಣಪತಿ ಹೆಗಡೆ, ವಿಶ್ವಸ್ತ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ್, ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ಸದಸ್ಯರಾದ ಕೆ.ಡಿ.ಬಡಿಗೇರ, ಎಚ್.ಸಿ.ರವಿ, ಎಂ.ಜಿ.ರಾಮದಾಸ್, ಕೆಂಗುಂಟೆ ಜಯಣ್ಣ, ಪಿ.ಕೆ.ರಾಜಪ್ಪ, ಯೋಗ ತರಬೇತುದಾರ ಎಸ್.ಆರ್.ಸಂತೋಷ್‌ಕುಮಾರ್, ಉಪನ್ಯಾಸಕರಾದ ಎನ್.ಎಸ್.ರುದ್ರೇಶ್, ಮಧು ಇತರರಿದ್ದರು.