

ಮೈಸೂರು: ಪೋಷಕರು ಮಕ್ಕಳನ್ನು ಪಠ್ಯದ ವಿಚಾರಗಳಿಗೆ ಮಾತ್ರ ಸೀಮಿತಗೊಳಿಸದೆ, ಕಲೆಗಳತ್ತಲೂ ಮುಖ ಮಾಡುವಂತೆ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಹೇಳಿದರು.
ಧಾರವಾಡದ ಪಪೆಟ್ ಹೌಸ್, ಸಂಚಲನ ಮೈಸೂರು ವತಿಯಿಂದ ನಗರದ ಧ್ವನ್ಯಲೋಕದಲ್ಲಿ ಬುಧವಾರ ಆಯೋಜಿಸಿದ್ದ ‘ಅದ್ಭುತ ರಾಮಾಯಣ’ ಛಾಯಾಚಲನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಛಾಯಾಚಲನೆ ಕಲೆ ಎಂದರೆ ಏನು ಎನ್ನುವುದೇ ತಿಳಿದಿಲ್ಲ. ಜೊತೆಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ. ಆದರೆ ಪೋಷಕರು ಪಠ್ಯದ ಜೊತೆಗೆ ಪಠ್ಯೇತರ ಚುಟವಟಿಕೆ ಕುರಿತು ಆಸಕ್ತಿ ಬೆಳೆಸಬೇಕು. ಎಲ್ಲ ಕಲೆಗಳಿಗೆ ಅದರದೇ ಆದ ಮಹತ್ವ ಇದ್ದು, ಅದನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ನಶಿಸುತ್ತಿರುವ ಛಾಯಾಚಲನೆಯಂತ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಜನರಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ರಂಗಾಯಣ ಉಪ ನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ, ಇಂದಿನ ಮಕ್ಕಳು ತಾಂತ್ರಿಕವಾಗಿ ಬಹಳ ಮುಂದೆ ಹೋಗಿದ್ದರೂ ನಮ್ಮ ಸಂಸ್ಕೃತಿ, ಪರಂಪರೆಯ ಮಹತ್ವದ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ವಿಷಾಧಿಸಿದರು.
ನಮ್ಮ ಕಲೆ, ಸಂಸ್ಕೃತಿಯನ್ನು ಶಾಲಾ ಹಂತದಲ್ಲಿಯೇ ತಿಳಿಸಿಕೊಡುವ ಕೆಲಸ ಆಗಬೇಕು. ಸಂಸ್ಕೃತಿ ಹಾಗೂ ಕಲೆಗಳಿಗೆ ಅದರದೇ ಶಕ್ತಿ ಮತ್ತು ಮಹತ್ವ ಇದೆ. ಅದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಧ್ವನ್ಯಾಲೋಕ ನಿರ್ದೇಶಕಿ ಜಯಶ್ರೀಸಂಜಯ್, ಧಾರವಾಡದ ರಂಗ ನಿರ್ದೇಶಕಿ ರಜನಿ ಗರುಡ, ಸಂಚಲನ ಮೈಸೂರು ತಂಡ ಅಧ್ಯಕ್ಷ ದೀಪಕ್ ಇತರರು ಇದ್ದರು.