ಕಲೆ, ಸಂಸ್ಕೃತಿ ರಕ್ಷಣೆಗೆ ಪಣತೊಡಿ

web (2)
Published on

ಚಿಕ್ಕಮಗಳೂರು: ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯ ಮರೆಯಬಾರದು ಎಂದು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷೆ ಪಲ್ಲವಿ ಸಿ.ಟಿ. ರವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್, ತಾಲೂಕು ಮತ್ತು ಹೋಬಳಿ ಘಟಕದಿಂದ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಮಾಸಾಚರಣೆಗೆ ನಗರದ ಲಾಲ್ ಬಹದೂರ್ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಕೆಲ ವರ್ಷಗಳ ಹಿಂದೆ ನಗರ, ಪಟ್ಟಣ, ಹಳ್ಳಿ ಹಳ್ಳಿಗಳಲ್ಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜನಜೀವನದ ಹಾಸುಹೊಕ್ಕಾಗಿತ್ತು. ಆಧುನಿಕತೆಗೆ ನಮ್ಮನ್ನು ತೆರೆದುಕೊಂಡ ನಂತರ ಕಂಪ್ಯೂಟರ್, ಟಿ.ವಿ. ಮತ್ತು ಮೊಬೈಲ್ ಹಾವಳಿಯಲ್ಲಿ ಅವು ಜನಮಾನಸದಿಂದ ದೂರಾಗುತ್ತಿವೆ ಎಂದು ವಿಷಾದಿಸಿದರು.

ಸುಗ್ಗಿ ಹಬ್ಬದ ಸಂಪ್ರದಾಯ, ಸಂಸ್ಕೃತಿ, ಕಟ್ಟುಪಾಡು ಮತ್ತು ಆಚರಣೆಗಳು ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗಿವೆ. ಬದಲಾದ ಇಂದಿನ ಸನ್ನಿವೇಶದಲ್ಲಿ ವಿದ್ಯುನ್ಮಾನ ಮಾಧ್ಯಮ ಅನಿವಾರ್ಯ ಆಗಿರುವುದರಿಂದ ಅವುಗಳನ್ನು ಬಳಸಿ. ಜತೆಗೆ ನಮ್ಮ ಕಲೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನೂ ಬೆಳೆಸಿ ಎಂದು ತಿಳಿಸಿದರು.

ಜಾನಪದ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಸುಗಮ ಸಂಗೀತ ಗಂಗಾ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಜಾನಪದ ನಮ್ಮ ಹಿರಿಯರ ಜೀವನಾನುಭವದ ಸಾಹಿತ್ಯ. ತಮ್ಮ ನೋವು, ನಲಿವುಗಳ ಅನುಭವವನ್ನು ಹಾಡುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ಇಂದಿನ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಆಧುನೀಕರಣದ ನಾಗಾಲೋಟದಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಿದೆ. ಈ ಮೂಲಕ ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸುವ ಉದ್ದೇಶದಿಂದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಇಡೀ ತಿಂಗಳು ನಡೆಸಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಸಿದ್ದಪ್ಪ ಟಿ. ಟಕ್ಕಳಿಕೆ, ಕಜಾಪ ತಾಲೂಕು ಅಧ್ಯಕ್ಷ ಬಿ.ಆರ್.ಜಗದೀಶ್, ಜಿಲ್ಲಾ ಕಾರ್ಯದರ್ಶಿ ಎ.ಆರ್.ಪ್ರಕಾಶ್, ಶಿಕ್ಷಕರಾದ ಎಚ್.ಎಂ.ಓಂಕಾರಪ್ಪ, ಧಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net