ಕಲೆ, ಕ್ರೀಡೆಗೆ ಕಲ್ಪತರುನಾಡು ಹೆಸರುವಾಸಿ

15 02
Published on

ಶಾಸಕ ಕೆ.ಷಡಕ್ಷರಿ ಬಣ್ಣನೆ,  ಹೊನಲು ಬೆಳಕಿನ ವಾಲಿಬಾಲ್​ ಪಂದ್ಯಾವಳಿ ಉದ್ಘಾಟನೆ

ತಿಪಟೂರು: ಕಲ್ಪತರು ನಾಡಿನಲ್ಲಿ ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಬಡ್ಡಿ ಮತ್ತು ವಾಲಿಬಾಲ್​ಗೆ ಸಹಕಾರಿಯಾಗುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅಗತ್ಯ ಅನುದಾನ ತರಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ಭರವಸೆ ನೀಡಿದರು.

ನಗರದ ಕಲ್ಪತರು ಕ್ರಿಡಾಂಗಣದಲ್ಲಿ ಗುರುವಾರ ಸ್ಪಂದನ ಕ್ರೀಡಾ ಮತ್ತು ಸಾಂಸತಿಕ ಸಂಘ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್​ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಜನರಿಗೆ ರಸದೌತಣ ಸಿಗಲಿದೆ. ಕಲ್ಪತರುನಾಡು ಕಲೆ, ಕ್ರೀಡೆಗೆ ಹೆಸರಾಗಿದೆ. ಇಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕ್ರೀಡೆಗಳನ್ನು ಉಳಿಸಿ, ಬೆಳೆಸಲಾಗುತ್ತಿದೆ. ಕಲೆ ಮತ್ತು ಕ್ರೀಡೆಗಳಿಂದ ಕ್ರೀಡಾಪಟುಗಳು ಆರೋಗ್ಯದಿಂದಿರಲು ಸಹಕಾರಿ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

ಕ್ರೀಡೆಗಳಲ್ಲಿ ಒಬ್ಬರು ಸೋತಾಗ ಮಾತ್ರ ಇನ್ನೊಬ್ಬರ ಗೆಲುವು ಸಾಧ್ಯ, ಆದರೆ ಸೋಲು&ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಸೋತಾಗ ಕಳೆಗುಂದದೇ, ಮುಂದಿನ ಬಾರಿ ಗೆಲ್ಲುವ ಕಾರ್ಯತಂತ್ರ ರೂಪಿಸಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿ, ಕ್ರೀಡೆ ಶಾಂತಿಯುತವಾಗಿ ನಡೆಯಲಿ ಎಂದು ಆಶಿಸಿದರು.

ಕ್ರೀಡಾಜ್ಯೋತಿ ಸ್ವೀಕರಿಸಿದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕ್ರೀಡೆ ಆರೋಗ್ಯಕ್ಕೆ ಉತ್ತೇಜನ ಕೊಡುವ ಪ್ರಕ್ರಿಯೆ. ಮನಸ್ಸು ಮತ್ತು ಮೈ ಚಟುವಟಿಕೆ ನಿರತವಾಗಿದ್ದರೆ ಮೈ ಹಗುರವಾಗಿರುತ್ತದೆ. ಅದು ಉತ್ತಮ ಆರೋಗ್ಯದ ಸಂಕೇತ.

ಹೀಗಾಗಿ ದಿನನಿತ್ಯ ಚಟುವಟಿಕೆ ಅಗತ್ಯ. ಶರೀರ ಹಗುರವಾದಲ್ಲಿ ರಚನಾತ್ಮಕ ಚಟುವಟಿಕೆಯಿಂದ ಕೂಡಿರಲು ಸಾಧ್ಯ ಎಂದರು.

ದುಬಾರಿ ಕಾಲದಲ್ಲಿ ಕ್ರೀಡೆ ಆಯೋಜನೆ ಮರೀಚಿಕೆಯಾಗಿದೆ. ಆದರೆ, ತಿಪಟೂರು ತಾಲೂಕಿನಲ್ಲಿ ಕ್ರೀಡೆಗಳಿಗೆ ತೋರಿಸುತ್ತಿರುವ ಉತ್ತೇಜನ ಗಮನಿಸಿದ್ದೇನೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ರೀತಿ ಕ್ರೀಡಾ ವ್ಯವಸ್ಥೆ ಊಹಿಸಲೂ ಸಾಧ್ಯವಿಲ್ಲ. ಕ್ರೀಡಾ ಭಾವನೆ ಶಾಶ್ವತವಾಗಿ ಪ್ರಜ್ವಲಿಸುತ್ತಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ಮೂರು ದಿನಗಳ ಪಂದ್ಯ: ಒಟ್ಟು ಮೂರು ದಿನಗಳ ರಾಷ್ಟ್ರಿಯ ಮಟ್ಟದ ಪುರುಷರ ಮತ್ತು ಮಹಿಳೆಯರ ವಾಲಿಬಾಲ್​ ಪಂದ್ಯಾವಳಿ ವಿಜೇತ ಪುರುಷರ ತಂಡಕ್ಕೆ ಮೊದಲ ಬಹುಮಾನ 1.50 ಲಕ್ಷ ರೂ. ನಗದು, ಎರಡನೇ ಬಹುಮಾನ 1 ಲಕ್ಷ. ಮೂರನೇ ಬಹುಮಾನ 50 ಸಾವಿರ. ಮತ್ತು ಮಹಿಳೆಯರ ವಿಭಾಗದಲ್ಲಿ ಮೊದಲ ಬಹುಮಾನ 90 ಸಾವಿರ, ಎರಡನೇ ಬಹುಮಾನ 60 ಸಾವಿರ ಮತ್ತು ಮೂರನೇ ಬಹುಮಾನ 30 ಸಾವಿರ ರೂಪಾಯಿ ಮತ್ತು ಆಕರ್ಷಕ ಟ್ರೋಪಿ ಒಳಗೊಂಡಿದೆ. ಮಹಿಳಾ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ತಮಿಳುನಾಡಿನ ಎಸ್​ಆರ್​ಎಂ ತಂಡ ಕೇರಳದ ಪಿಕೆಆರ್​ ತಂಡವನ್ನು ಮಣಿಸಿತು.

ಸಮಾರಂಭದಲ್ಲಿ ನಗರಾಯುಕ್ತ ವಿಶ್ವೇಶ್ವರ ಬದರಗಡೆ, ನಗರಠಾಣೆಯ ಇನ್​ಸ್ಪೆಕ್ಟರ್​ ಸಿ.ವೆಂಕಟೇಶ್​, ತುಮುಲ್​ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್​, ಮಾದಿಹಳ್ಳಿ ರೇಣು, ಟ್ರಸ್ಟಿನ ಡಾ. ಕೆ.ಎಸ್​. ನವೀನ್​ಕುಮಾರ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net