

ತುಮಕೂರು; ನಮ್ಮ ದೇಶದ ಭಾಷೆ, ಕಲೆ ಮತ್ತು ಸಂಸ್ಕೃತಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಹೊಸ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಮಹತ್ವ ಕೊಡಲಾಗಿದೆ ಎಂದು ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯ ಕುಲಾಧಿಪತಿಯೂ ಆದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಹೇಳಿದರು.
ತುಮಕೂರು ವಿವಿಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಶುಕ್ರವಾರ 14ನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, ಕಲೆ, ಕೌಶಲಗಳ ಮಿಳಿತದ ತವರು ಭಾರತ. ಸಾಹಿತ್ಯ, ಆಚಾರ, ಭಾಷೆಗಳ, ಪಾರಂಪರಿಕ ಸ್ಥಳಗಳ, ಸಹಸ್ರಾರು ವರ್ಷಗಳ ಇತಿಹಾಸಗಳ ಸಂಸ್ಕೃತಿಯ ಬೀಡು. ಹಾಗಾಗಿ, ನಮ್ಮ ಕಲೆ, ಸಂಸ್ಕೃತಿಗೆ ಒತ್ತು ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತಗೊಳಿಸುವುದು ಬಹುಮುಖ್ಯ ಎಂದರು.
ಭಾಷೆಯು ಕಲೆ ಮತ್ತು ಸಂಸ್ಕೃತಿಯ ಪರಿಧಿಯಲ್ಲಿ ಅಂತರ್ಗತವಾಗಿರುತ್ತದೆ. ಸಂಸ್ಕೃತಿ ರಕ್ಷಣೆ ಮತ್ತು ಅದರ ಪ್ರಸರಣದಲ್ಲಿ ಭಾಷೆ ಮಹತ್ವದ ಪಾತ್ರವಹಿಸಿದೆ. ಆದರೆ, 50 ವರ್ಷಗಳಲ್ಲಿ 220 ಭಾರತೀಯ ಭಾಷೆಗಳು ಸೂಕ್ತ ಪೋಷಣೆ ಇಲ್ಲದೆ ನಶಿಸಿ ಹೋಗಿದ್ದರೆ, ರಾಷ್ಟ್ರದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳಂತೆ ಇನ್ನೂ ಕೆಲವು ಭಾಷೆಗಳು ಸಂಕಷ್ಟದ ಸುಳಿಯಲ್ಲಿದ್ದು ವಿನಾಶದಂಚಿನಲ್ಲಿವೆ. ಹಾಗಾಗಿ, ಹೊಸ ಶಿಕ್ಷಣ ನೀತಿಯಡಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳಲ್ಲಿ ಸಂಸ್ಕೃತ ಸೇರಿ ಭಾರತೀಯ ಭಾಷೆಗಳ ಕಲಿಕೆ ಮತ್ತು ಪಾಠವನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಪ್ರಾದೇಶಿಕ, ಆಧುನಿಕ ಮತ್ತು ಪ್ರಾಚೀನ ಭಾಷೆಗಳ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಎನ್‌ಇಪಿನಲ್ಲಿ ಪ್ರಸ್ತಾಪಿಸಿರುವುದು ಹೊಸ ಆಶಾಭಾವನೆ ಸೃಷ್ಟಿಸಿದೆ ಎಂದು ತಿಳಿಸಿದರು.
21ನೇ ಶತಮಾನದ ಶೈಕ್ಷಣಿಕ ಗುರಿಗಳಿಗೆ ಹಾಗೂ ಭಾರತದ ಮೌಲ್ಯ ವ್ಯವಸ್ಥೆಗೆ ಅನುಗುಣವಾದ ವ್ಯವಸ್ಥೆಯೊಂದನ್ನು ರೂಪಿಸುವುದು ಹೊಸ ಶಿಕ್ಷಣ ನೀತಿಯ ಕಾರ್ಯತಂತ್ರದ ಉದ್ದೇಶ. ದೇಶದ ಶೈಕ್ಷಣಿಕ ನೀಲ ನಕಾಶೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರಂತರತೆ, ಸುಸಂಬದ್ಧತೆ ಮತ್ತು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವುದು ಹೊಸ ಶಿಕ್ಷಣ ನೀತಿಯ ಮೂಲ. ತುಮಕೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಉದಾರ ಶಿಕ್ಷಣ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ ಎಂದು ಕಸ್ತೂರಿರಂಗನ್ ಸಂತಸ ವ್ಯಕ್ತಪಡಿಸಿದರು.
ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಆಶಯದಡಿ 2004ರಲ್ಲಿ ಸ್ಥಾಪನೆಯಾದ ತುಮಕೂರು ವಿವಿ ಉನ್ನತ ಕಲಿಕೆಗೆ ಅವಕಾಶ ಕಲ್ಪಿಸುವ ಜ್ಞಾನ ಚಾವಡಿಯಾಗಿ ಛಾಪು ಮೂಡಿಸಿದೆ. ಮಾನವಿಕ, ಸಾಮಾಜಿಕ ಹಾಗೂ ಸ್ವಾಭಾವಿಕ ವಿಜ್ಞಾನಗಳ ಸಮಗ್ರ ತಿಳಿವಳಿಕೆ ಪಡೆಯುವ ಸಲುವಾಗಿ ಸೂಕ್ಷ್ಮಸ್ತರದ ಶೈಕ್ಷಣಿಕ ಅನ್ವೇಷಣೆಯನ್ನು ಒಳಗೊಂಡ ಸಂಶೋಧನಾ ಸಂಸ್ಕೃತಿಯೇ ನಮ್ಮ ವಿಶ್ವವಿದ್ಯಾಲಯದ ವೈಶಿಷ್ಯ ಎಂದರು.
ವಿಶ್ವವಿದ್ಯಾಲಯಗಳು ರಾಷ್ಟ್ರ ನಿರ್ಮಾಣದ ತಳಪಾಯ: ರಾಷ್ಟ್ರ ನಿರ್ಮಾಣದ ತಳಪಾಯಗಳಾಗಿರುವ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಸ್ಫೂರ್ತಿಯ ಚಿಲುಮೆಗಳ ಸಂಕೇತವೆನಿಸಿವೆ ಎಂದು ಇಸ್ರೋ ವಿಶ್ರಾಂತ ಅಧ್ಯಕ್ಷ, ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಕೆ.ಕಸ್ತೂರಿರಂಗನ್ ಹೇಳಿದರು. ಹೊಸ ಆಲೋಚನೆಗಳು ಮತ್ತು ಜ್ಞಾನವನ್ನು ಉತ್ಪಾದಿಸಲು ಹಾಗೂ ಪ್ರಸಾರ ಮಾಡುವ ದೀರ್ಘಕಾಲಿಕ ಮೂಲಗಳಾಗಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸಮಕಾಲೀನ ಜಗತ್ತಿನಲ್ಲಿ ಉನ್ನತ ಕಲಿಕೆಗೆ ಅವಕಾಶಗಳನ್ನು ಒದಗಿಸುವ ಸಂಸ್ಥೆಗಳ ಮಾದರಿಗಳಲ್ಲಿ, ವಿವಿಗಳು ಸಮಯ, ಪರೀಕ್ಷಿತ ವಿಧಾನಗಳು ಹಾಗೂ ಮೌಲ್ಯ ವ್ಯವಸ್ಥೆಗಳೊಂದಿಗೆ ಕೇಂದ್ರ ಸ್ಥಾನವನ್ನು ಪಡೆದಿವೆ ಎಂದರು. ಜ್ಞಾನ ಮತ್ತು ಚಿಂತನೆಯ ಕಡೆಗಿನ ನಿರಂತರ ಹುಡುಕಾಟವು ನಮ್ಮ ಬೌದ್ಧಿಕ ಪರಂಪರೆಯ ವಿಶಿಷ್ಟ ಲಕ್ಷಣವಾಗಿದೆ. ಉನ್ನತ ಶಿಕ್ಷಣವು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ಸಮಾಜದ ಕಾರ್ಯಾಚರಣೆ ಅಗತ್ಯಗಳನ್ನು ಪೂರೈಸಲು ಇದು ನಿರಂತರವಾಗಿ ಸುಧಾರಣೆ, ವಿಕಸನ ಮತ್ತು ವೈವಿಧ್ಯ ಹೊಂದುತ್ತಿರಬೇಕು ಎಂದರು.
ಪ್ರಸಾದ್‌ಗೆ ಗೌರವ ಡಾಕ್ಟರೇಟ್!: ಸಾಮಾಜಿಕ ಸೇವಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹೆಸರಾಂತ ಉದ್ಯಮಿ, ಚಾರ್ಟರ್ಡ್ ಅಕೌಂಟೆಂಟ್ ಐ.ಎಸ್. ಪ್ರಸಾದ್ ಅವರಿಗೆ ವಿವಿ ಕುಲಾಧಿಪತಿ, ರಾಜ್ಯಪಾಲ ವಿ.ಆರ್.ವಾಲಾ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಕಳೆದ ನಾಲ್ಕು ದಶಕಗಳಿಂದ ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸಿರುವ ಪ್ರಸಾದ್ ಅವರು ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ)ನ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಸೌಲಭ್ಯ, ಶಿಕ್ಷಣ, ಯುವಸಬಲೀಕರಣ ಸೇರಿ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಸಾದ್ ಯಶಸ್ವಿ ಉದ್ಯಮಿಯೂ ಆಗಿದ್ದಾರೆ.
ಪದವಿ ಪ್ರದಾನ: ವಿವಿ ಕುಲಾಧಿಪತಿ, ರಾಜ್ಯಪಾಲ ವಿ.ಆರ್.ವಾಲಾ ಘಟಿಕೋತ್ಸವ ಅಧ್ಯಕ್ಷತೆ ವಹಿಸಿ, ಮೂವರಿಗೆ ಡಿ.ಲಿಟ್., 142 ಅಭ್ಯರ್ಥಿಗಳಿಗೆ ಪಿಎಚ್‌ಡಿ., ಸ್ನಾತಕ, ಸ್ನಾತಕೋತ್ತರ ಪದವಿಯ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣಪದಕ, ಪದವಿ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು. ಪ್ರಭಾರ ಕುಲಸಚಿವ ಪ್ರೊ.ಬಿ.ಟಿ.ಸಂಪತ್ ಕುಮಾರ್, ಮೌಲ್ಯಮಾಪನ ಕುಲಸಚಿವ ಪ್ರೊ.ನಿರ್ಮಲ್ ರಾಜು ಇದ್ದರು.
ಹೊಸ ಶಿಕ್ಷಣ ನೀತಿ ಅನುಷ್ಠಾನದ ಆಧಾರಸ್ತಂಭಗಳು ಅಧ್ಯಾಪಕರು. ಅವರ ಕಲಿಕಾ ಸಿದ್ಧತೆಗೆ, ಉದ್ಯೋಗಸ್ಥಳದ ಪರಿಸ್ಥಿತಿಗಳಿಗೆ, ನಿರಂತರ ವೃತ್ತಿಪರ ಬೆಳವಣಿಗೆ ವಿಶೇಷ ಆದ್ಯತೆ ಕೊಡಲಾಗಿದೆ. ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಯಶಸ್ವಿ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ. ಡಾ.ಕೆ.ಕಸ್ತೂರಿರಂಗನ್ ಇಸ್ರೋ ವಿಶ್ರಾಂತ ಅಧ್ಯಕ್ಷ