ಕಲುಷಿತ ನೀರು ಸೇವಿಸಿ 50 ಜನ ಅಸ್ವಸ್ಥ

28RAM1
ಬೆನ್ನೂರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Published on

ರಾಮದುರ್ಗ: ಪೈಪ್‌ಲೈನ್‌ನಲ್ಲಿ ಚರಂಡಿ ನೀರು ಮಿಶ್ರಣವಾಗಿರುವ ಕುಡಿಯುವ ನೀರು ಸೇವಿಸಿದ 50 ಜನರಿಗೆ ವಾಂತಿ-ಭೇದಿಯಾಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳೆದೆರಡು ದಿನಗಳಿಂದ ಗ್ರಾಮದಲ್ಲಿರುವ ಕುಡಿಯುವ ನೀರು ಸರಬರಾಜು ಮಾಡುವ ಏರ್‌ಟ್ಯಾಂಕ್ ದುರಸ್ತಿ ಕಾರ್ಯ ಪ್ರಾರಂಭಗೊಂಡಿದೆ. ಇದರಿಂದ ನೇರವಾಗಿ ನದಿಯಲ್ಲಿ ನಿರ್ಮಿಸಿದ ಬಾವಿಯಿಂದಲೇ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಪೈಪ್‌ಲೈನ್ ಲಿಕೇಜ್ ಆಗಿ ಕಲುಷಿತ ನೀರು ಕುಡಿದು ಗ್ರಾಮದ ಸುಮಾರು 40-50 ಜನ, ಯುವಕರು, ವಯೋವೃದ್ಧರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ರಾಮದುರ್ಗದ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ-ಭೇದಿಯೊಂದಿಗೆ ರಕ್ತದೊತ್ತಡ ಸಮಸ್ಯೆಯಿಂದ ಕೆಲವರು ತೀವ್ರ ನೀಗಾ ಘಟಕಗಳಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಸ್ಥರ ಆರೋಪ: ಸ್ಥಳೀಯ ಗ್ರಾಪಂ ಅಧಿಕಾರಿಗಳು ಹಾಗೂ ನೀರು ಸರಬರಾಜು ಮಾಡುವ ಸಿಬ್ಬಂದಿ ಕಾಳಜಿ ವಹಿಸುವುದಿಲ್ಲ. ಏರ್‌ಟ್ಯಾಂಕ್‌ನ್ನೂ ಸ್ವಚ್ಛಗೊಳಿಸಿಲ್ಲ. ಗ್ರಾಮಸ್ಥರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಮಾಡದ್ದರಿಂದ ಅಶುದ್ಧ ಕುಡಿಯುವ ನೀರು ಸರಬರಾಜಾಗಿದೆ. ಸಂಬಂಧಪಟ್ಟ ತಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಸೀಲ್ದಾರ್ ಭೇಟಿ: ಬೆನ್ನೂರ ಗ್ರಾಮಕ್ಕೆ ಬಧವಾರ ಭೇಟಿ ನೀಡಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಸಂಬಂಧಪಟ್ಟ ಹೊಸಕೇರಿ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡದರು. ಪೈಪ್‌ಲೈನ್ ಲಿಕೇಜ್ ಆಗಿರುವುದನ್ನು ಪರಿಹರಿಸಿ ಶುದ್ಧ ನೀರು ಪೂರೈಸುವಂತೆ ಸೂಚಿಸಿದ್ದಾರೆ. ಗ್ರಾಮದಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆನ್ನೂರ ಗ್ರಾಮದಲ್ಲಿ ಕುಡಿಯುವ ನೀರಿನಿಂದ ಜನತೆ ಅಸ್ವಸ್ಥಗೊಂಡಿದ್ದು ತಿಳಿದು ಬಂದಿದೆ. ಸಂಬಂಧಿತ ಪಿಡಿಒಗಳು ಹಾಗೂ ಗ್ರಾಮದಲ್ಲಿ ಜೆಜೆಎಂ ಕುಡಿಯುವ ನೀರಿನ ನಳಗಳ ಸಂಪರ್ಕ ಮಾಡುವ ಗತ್ತಿಗೆದಾರರಿಗೆ ಶುದ್ಧ ನೀರು ಪೂರೈಸಲು ಸೂಚಿಸಿದ್ದೇನೆ. ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತೇನೆ.| ಪ್ರವೀಣಕುಮಾರ ಸಾಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net