ಕೊಳ್ಳೇಗಾಲ: ತಾಲೂಕಿನ ಕೆರೆಗಳಿಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಗೆ ತಾಲೂಕು ಗುಂಡಾಲ್ ಹಳೇ ಸ್ಥಿರ ಅಚ್ಚುಕಟ್ಟು ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರಕ್ಕೆ ಶನಿವಾರ ಭೇಟೆ ನೀಡಿದ್ದ ಸಚಿವರಿಗೆ ಸಮಿತಿ ಅಧ್ಯಕ್ಷ ದಶರಥ ದೂರು ಸಲ್ಲಿಸಿ, ಕಾವೇರಿ ಮತ್ತು ಕಬಿನಿ ನಾಲೆಗಳಿಂದ ಕೆರೆಗೆ ನೀರು ತುಂಬಿಸಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ, ನಿಜವಾಗಿಯೂ ಕೆರೆಗೆ ಕಲುಷಿತ ನೀರು ಸೇರುತ್ತಿದೆಯೇ ವಿನಃ, ನದಿಯ ನೀರು ಸೇರುತ್ತಿಲ್ಲ ಎಂದರು. ಕೆರೆ ಒತ್ತುವರಿ ಜತೆ ಹೂಳಿನಿಂದ ಕೆರೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಖುದ್ದಾಗಿ ಒಮ್ಮೆ ಕೆರೆಗಳ ಶೋಚನೀಯ ಸ್ಥಿತಿಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ಕೆರೆ ಸ್ಥಿತಿಗತಿ ವೀಕ್ಷಿಸುವುದಾಗಿ ಭರವಸೆ ಇತ್ತರು.
ರೈತ ಮುಖಂಡ ರಾಮಕೃಷ್ಣ ಮೋಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾರ್ಯದರ್ಶಿ ರವಿ ಬಸ್ತೀಪುರ, ಮುಖಂಡ ಅನ್ಸರ್ ಬೇಗ್, ರಮೇಶ್, ರಾಜೇಂದ್ರ ಮತ್ತಿತರಿದ್ದರು.