ಕಲಿತ ಶಾಲೆ ಅಭಿವೃದ್ಧಿಪಡಿಸುವುದು ಕರ್ತವ್ಯ

4SGN01
Published on

ಶಿಗ್ಗಾಂವಿ: ಪಟ್ಟಣದ ಬಿ.ಬಿ. ಮಾಮಲೆ ದೇಸಾಯಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಜರುಗಿತು.ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ದೇಶಪಾಂಡೆ ಮಾತನಾಡಿ, ‘ಕವಲು ದಾರಿಯಿಂದ ಕೂಡಿರುವ ಬದುಕನ್ನು ಸುಗಮ ದಾರಿಗೆ ಕೊಂಡೊಯ್ಯುವುದೇ ಶಿಕ್ಷಣವಾಗಿದೆ. ನಾವು ಕಲಿತ ಶಾಲೆಯ ಶ್ರೇಯೋಭಿವೃದ್ಧಿಗೆ ಕೈಜೋಡಿಸುವುದು ಹಳೆಯ ವಿದ್ಯಾರ್ಥಿಗಳ ಕರ್ತವ್ಯವಾಗಿದೆ’ ಎಂದರು. ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಸೇವಾ ನಿವೃತ್ತಿ ಹೊಂದುವ ಶಿಕ್ಷಕರನ್ನು ಗೌರವಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಳೆಯ ವಿದ್ಯಾರ್ಥಿಗಳ ಸಂಘದ ಉದ್ದೇಶವಾಗಿದೆ. ಸಂಘದ ವತಿಯಿಂದ ಈಗಾಗಲೇ 9.5 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಕಾಂಪೌಂಡ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದರು. ತಾಲೂಕು ಶಿಕ್ಷಣ ಸಮಿತಿ ಗೌರವ ಕಾರ್ಯದರ್ಶಿ ಎಸ್.ಪಿ. ಜೋಷಿ, ದತ್ತಣ್ಣ ವರ್ಣೆಕರ, ಜಿ.ಎನ್. ಯಲಿಗಾರ, ರಾಜಶೇಖರ ಹೆಸರೂರ, ಸುಧಾಕರ ದೈವಜ್ಞ, ಪರಿಮಳ ಜೈನ್, ಗುಳ್ಳಪ್ಪ ಅರಳಿಕಟ್ಟಿ, ಪ್ರಕಾಶ ಔಂದಕರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕಾರ್ತಿಕ ಶಡಗರವಳ್ಳಿ, ಸಂಗೀತಾ ನೀರಲಗಿ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಆರ್.ಎಸ್. ಭಟ್, ನಿಂಗಪ್ಪ ಕುನ್ನೂರ, ಮಂಜುನಾಥ ಕರಡಿ, ಹನುಮಂತ ದುರ್ಗದ, ಸುಭಾಸ ಮಾದರ, ಚಿದಾನಂದ ಯತ್ನಳ್ಳಿ, ಸುರೇಶ ಯಲಿಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net