ಕಲಿಕೆಯಲ್ಲಿರಲಿ ಕಠಿಣ ಪರಿಶ್ರಮ

20 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಸ್ಪತ್ರೆಗಳಿಗೆ ದಾನವಾಗಿ ನೀಡುವ ಶವಗಳು ಮಾನವ ದೇಹದ ಒಳನೋಟಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಹೀಗಾಗಿ ಕಲಿಕೆಗೆ ಮೀಸಲಿಟ್ಟ ಶವವನ್ನು ಶಿಕ್ಷಕರೆಂದು ಪರಿಗಣಿಸಬೇಕು ಎಂದು ಹಿರಿಯ ಪ್ರಾಧ್ಯಾಪಕ ಡಾ. ವೀರೇಶಕುಮಾರ ಶಿರೋಳ ಅಭಿಪ್ರಾಯಪಟ್ಟರು.

ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಶರೀರ ರಚನಾಶಾಸ್ತ್ರ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಶರೀರ ರಚನಾಶಾಸ್ತ್ರ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಹ ದಾನಿಗಳ ಉದಾತ್ತ ನಿರ್ಧಾರವನ್ನು ಗುರುತಿಸಿ ಗೌರವಿಸಬೇಕು. ವಿದ್ಯಾರ್ಥಿಗಳು ತಮ್ಮ ವೈದ್ಯಕಿಯ ವೃತ್ತಿಯನ್ನು ಆರಂಭದಿಂದಲೇ ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮವು ಅವರನ್ನು ಉತ್ತಮ ವೃತ್ತಿಪರರನ್ನಾಗಿ ಮಾಡುತ್ತದೆ ಎಂದರು.

ಎಸ್​ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ್​ ಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಶರೀರ ರಚನಾ ಶಾಸ್ತ್ರರಾದ ಡಾ. ವೀರೇಶ ಕುಮಾರ ಶಿರೋಳ, ಡಾ. ಎ.ವಿ. ಕುಲಕರ್ಣಿ, ಡಾ. ಎಸ್​.ಕೆ. ದೇಶಪಾಂಡೆ ಅವರಿಗೆ ಸನ್ಮಾನಿಸಲಾಯಿತು. ಶರೀರ ರಚನಾಶಾಸ್ತ್ರ ದಿನ ನಿಮಿತ್ತ ಶರೀರ ರಚನಾಶಾಸ್ತ್ರದ ಮಾದರಿ ಪ್ರದರ್ಶನ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿವಿ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್​, ಸಹ ಉಪ ಕುಲತಿ ವಿ. ಜೀವಂಧರ ಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಡಾ. ಸುರೇಶ ಮನಗುತ್ತಿ, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.

ಡಾ. ವೀಣಾ ಕುಲಕರ್ಣಿ ಸ್ವಾಗತಿಸಿದರು. ಡಾ. ವಿನಯ ಕುಲಕರ್ಣಿ ನಿರೂಪಿಸಿದರು. ಡಾ. ರೋಶನಿ ಸದಾಶಿವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net