ಕಲಿಕೆಯಲ್ಲಿನ ಹಿನ್ನಡೆಯನ್ನೇ ಸವಾಲಾಗಿ ಸ್ವೀಕರಿಸಿ

5-klr-2
Published on

ಕೋಲಾರ: ಕೋವಿಡ್‌ನಿಂದಾಗಿ ಕಲಿಕೆಯಲ್ಲಿ ಆಗಿರುವ ಹಿನ್ನಡೆಯನ್ನೇ ಸವಾಲಾಗಿ ಸ್ವೀಕರಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಬದ್ದತೆಯಿಂದ ಕೆಲಸ ಮಾಡಿ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಶಿಕ್ಷಕರಿಗೆ ಸೂಚಿಸಿದರು.

ಜಿಲ್ಲಾ ಸ್ಕೌಟ್ಸ್ ಭವನದಲ್ಲಿ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಪ್ರಗತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಕೋಲಾರ ಪರಿವಾರ ಅಧಿವೇಶನ ಹಾಗೂ ಪ್ರಥಮ ಸ್ಥಾನದ ಸಾಧನೆಗಾಗಿ ‘ಸ್ಫೂರ್ತಿ-ಪ್ರೇರಣಾ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕರೊನಾದಿಂದ ಒಂದೂವರೆ ವರ್ಷ ಭೌತಿಕ ತರಗತಿಗಳಿಂದ ದೂರವಾಗಿ ಮತ್ತೆ ಶಾಲೆಯತ್ತ ಬಂದಿರುವ ಮಕ್ಕಳನ್ನು ಸೇತುಬಂಧ ಮೂಲಕ ಕಲಿಕೆಯ ರಹದಾರಿಗೆ ಕರೆತರುವ ಕೆಲಸವಾಗಿದೆ. ಇದರ ಜತೆಗೆ ನಿರಂತರ, ಮನ್ವಂತರ, ಚಿರಂತರ, ತನ್ಮಯ, ವಿಸ್ಮಯ, ಸಮನ್ವಯದ ಧ್ಯೇಯಗಳೊಂದಿಗೆ ಮಕ್ಕಳಿಗೆ ಸ್ಫೂರ್ತಿ, ಪ್ರೇರಣೆಯಾಗಲು ವಿಷಯವಾರು ಶಿಕ್ಷಕರಿಗೆ ಈ ತರಬೇತಿ ನೀಡಲಾಗುತ್ತಿದೆ ಎಂದರು. ಮಕ್ಕಳು ಕಲಿಕೆಯ ಹಾದಿಗೆ ಸಾಗಿ ಬರಲು ಶಿಕ್ಷಕರ ಪ್ರಯತ್ನ ಅತಿ ಮುಖ್ಯವಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ 20,000ಕ್ಕೂ ಹೆಚ್ಚಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.

ಸರ್ಕಾರಿ, ಅನುದಾನಿತ ಶಿಕ್ಷಕರಿಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ನಡೆಸುತ್ತಿರುವ ತರಬೇತಿ, ಸಂವಾದ, ಕೋವಿಡ್‌ನಿಂದ ಕುಂಠಿತಗೊಂಡಿರುವ ಕಲಿಕಾ ಕಾರ್ಯದಲ್ಲಿ ಮತ್ತೆ ಕ್ರಿಯಾಶೀಲತೆ ಮೂಡಿಸುವ ಅನುಭವಮಂಟಪವಾಗಲಿದೆ ಎಂದರು.

45 ಶಾಲೆ ಆರಂಭ: ಮಾತೃಭಾಷೆ ಜತೆಗೆ ಆಂಗ್ಲಮಾಧ್ಯಮ, ಕಂಪ್ಯೂಟರ್ ಶಿಕ್ಷಣ ಜೀವನಾಧಾರ ಕೌಶಲವಾಗಿದೆ. ಈ ವರ್ಷದಿಂದ 45 ಆಂಗ್ಲಮಾಧ್ಯಮ ತರಗತಿಗಳಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಯ 2632 ಶಾಲೆಗಳಲ್ಲಿ ಸುಮಾರು 2 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳ ಭವಿಷ್ಯ 4000 ಶಿಕ್ಷಕರ ಕೈಯಲ್ಲಿದೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ, ಮಕ್ಕಳಲ್ಲಿ ಓದು ಬರವಣಿಗೆ ಜ್ಞಾನ ಹೆಚ್ಚಿಸಿ, ಭಾಷಾ ವಿಷಯಗಳಲ್ಲಿ ಪ್ರಾವಿಣ್ಯತೆ ಬಂದರೆ ಐಚ್ಚಿಕ ವಿಷಯಗಳ ಕಲಿಕೆ ಸುಲಭ, ಗುಣಮಟ್ಟದ ಫಲಿತಾಂಶದತ್ತ ನಮ್ಮ ಗುರಿ ಇರಲಿ, ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ ಸಿದ್ಧಪಡಿಸಲಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನ-ಮಾನ ಕಾಪಾಡುವ ಬದ್ಧತೆ ಶಿಕ್ಷಕರಲ್ಲಿ ಬರಲಿ ಎಂದರು. ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಸಿರಾಜುದ್ದೀನ್, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಕವಿತಾ, ರಮಾ, ಅಸ್ಮಾಫಾತಿಮಾ, ಪ್ರಕಾಶ್, ಜೀನತ್ ಸುಲ್ತಾನ, ಸುಷ್ಮಾ, ಫನಿಮಲರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net