

ಹರಪನಹಳ್ಳಿ: ಬೋಧನೆ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಬಿಇಒ ಎಚ್.ಲೇಪಾಕ್ಷಪ್ಪ ತಿಳಿಸಿದರು.
ಮತ್ತಿಹಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಬುಧವಾರ ಮಾತನಾಡಿದರು. ಕಲಿಕೆ ನಿರಂತರವಾಗಿದ್ದು, ವೃತ್ತಿ ಜ್ಞಾನ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಒಳಾಂಗಣ ಮತ್ತು ಹೊರಾಂಗಣ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ, ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ಸಂತೋಷದಾಯಕ ಕಲಿಕೆಗೆ ಒತ್ತು ನೀಡಲಾಗುತ್ತದೆ. ಕಲಿಕೆಯನ್ನು ಫಲಪ್ರದಗೊಳಿಸಲು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ರೂಪಿಸುತ್ತದೆ. ಕಲಿಕಾ ಹಬ್ಬದಿಂದ ಮಕ್ಕಳಲ್ಲಿ ಶೈಕ್ಷಣಿಕ ಬಲವರ್ಧನೆಯಾಗಲಿದೆ ಎಂದರು.
ಸಿಆರ್‌ಪಿ ಗಿರಿರಾಜ್ ಎಲ್.ಎಚ್. ಮಾತನಾಡಿ. ಕಲಿಕೆಯ ದೃಢೀಕರಣವೇ ಕಲಿಕಾ ಹಬ್ಬದ ಮೂಲ ಉದ್ದೇಶವಾಗಿದೆ. ವಿಧ್ಯಾರ್ಥಿಗಳು ಸಂತೋಷದಿಂದ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಜ್ಞಾನ ವಿಕಸನವಾಗಲಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಸುವ ಪೂರಕ ಚಟುವಟಿಕೆಗಳಿಗೆ ಒತ್ತು ನೀಡುತ್ತದೆ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಯಶಸ್ವಿಯಾದಾಗ ಶಿಕ್ಷಕರಿಗೆ ಶ್ರಮ ಸಾರ್ಥಕವಾದ ಭಾವನೆ ಮೂಡಿಸುತ್ತದೆ ಎಂದರು.