

ಎನ್.ಆರ್.ಪುರ: ಮಕ್ಕಳು ಕಲಿಕೆಯಲ್ಲಿ ಯಶಸ್ಸು ಕಂಡಾಗ ಶಿಕ್ಷಕರಿಗೆ ಆನಂದ, ಹೆಮ್ಮೆ ಉಂಟಾಗುತ್ತದೆ ಎಂದು ರಾಜ್ಯ ಬಡ್ತಿ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಎ.ಇ.ಅಶೋಕ್ ಅಭಿಪ್ರಾಯಪಟ್ಟರು.
ಶುಕ್ರವಾರ ಅಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಳೇಹಳ್ಳಿ ಶಾಲೆ ಬಹಳ ಆಕರ್ಷಣೀಯವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಶಿಕ್ಷಣ ಇಲಾಖೆಯ ಎಲ್ಲ ಕಾರ್ಯಕ್ರಮಗಳನ್ನೂ ಶಿಕ್ಷಕರು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಸುಭಾಷ್ ಮಾತನಾಡಿ, ಅಳೇಹಳ್ಳಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಓಂಕಾರಪ್ಪ ಮಾತನಾಡಿ, ಕಲಿಕಾ ಹಬ್ಬದಿಂದ ಮಕ್ಕಳಿಗೆ ಶೈಕ್ಷಣಿಕವಾಗಿ ಯಾವ ರೀತಿ ಉಪಯೋಗವಾಗಲಿದೆ ಎಂಬುದರ ಕುರಿತು ವಿವರಿಸಿದರು.
ಶಾಲೆ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿ ರತನ್‌ಗೌಡ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಹಾಗೂ ಪಾಲಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಬಾಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜನಾಯಕ್, ತಿಮ್ಮೇಶ್, ಮಂಜಪ್ಪ, ಗಿರೀಶ್ ನಾಯಕ್, ಕೆಂಚಪ್ಪ, ಹಿರೇನಲ್ಲೂರು ಶ್ರೀನಿವಾಸ್ ಇದ್ದರು.