ಕಲಿಕಾ ಹಬ್ಬದಲ್ಲಿ ಹಬ್ಬದ ಸಡಗರ

IMG-20230130-WA0054
Published on

ಹೊಳೆನರಸೀಪುರ: ಕರೊನಾದಿಂದಾಗಿ 2 ವರ್ಷ ಮಕ್ಕಳು ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗಿದ್ದರು. ಹೀಗಾಗಿ, ಇಲಾಖೆಯು ಮಕ್ಕಳಿಗೆ ಕಲಿಕಾ ಹಬ್ಬ ಕಾರ್ಯಕ್ರಮ ಆಯೋಜಿಸಿದೆ ಎಂದು ತಾತನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹರೀಶ್ ಹೇಳಿದರು.

ತಾಲೂಕಿನ ಹಳ್ಳಿ ಮೈಸೂರು ಹೋಬಳಿ ತಾತನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ನಾಲ್ಕು ವಿಭಾಗಗಳಲ್ಲಿ ಕಲಿಯುತ್ತಾರೆ. ಊರು ಸುತ್ತೋಣ, ವಿಜ್ಞಾನ ಸಂಗತಿ ತಿಳಿಯೋಣ, ಹಾಡು ಹಾಡೋಣ, ಹಬ್ಬ ಆಚರಿಸೋಣ, ಕಾಗದ ಕತ್ತರಿ ಎಂಬ ಶೀರ್ಷಿಕೆಯಡಿ ಮಕ್ಕಳು ಕಲಿಯುತ್ತಾರೆ. ಕಲಿಕಾ ಹಬ್ಬ ಎಂಬ ಹೆಸರೇ ಹೇಳುವಂತೆ ಇಲ್ಲಿ ಹಬ್ಬದ ಸಡಗರ ಇರುತ್ತದೆ ಎಂದರು.

6ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಹಾಡು, ನೃತ್ಯ, ಕರಕುಶಲ ಕಲೆ, ಕವನ ರಚಿಸುವುದು, ಕಥೆ ಹೇಳುವುದು, ಬಣ್ಣದ ಕಾಗದದಲ್ಲಿ ಹೂವು ಹಾಗೂ ಕ್ರಾಫ್ಟ್ ವರ್ಕ್ ಮಾಡುವುದು, ಮರದ ಅಳತೆಯನ್ನು ಅಳೆಯುವುದು, ಗ್ರಾಮದ ನಕ್ಷೆಯನ್ನು ಬರೆಯುವುದು, ಮರದ ಇತಿಹಾಸ ತಿಳಿಯುವುದು, ಇತರ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಎರಡು ದಿನಗಳ ಕಾಲ ವಿದ್ಯಾರ್ಥಿಗಳು ನಕ್ಕು ನಲಿಯುತ್ತಾರೆ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಹೇಮಂತ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಡಿ.ಎಸ್.ಕೃಷ್ಣಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ಖಜಾಂಚಿ ಗಂಗಾಧರ್, ದಾನಿಗಳಾದ ರೇಣುಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net