

ಹುಣಸೂರು: ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆಗಳು ಅವರ ಪ್ರಜ್ಞೆಯ ಜೀವಂತಿಕೆಗೆ ಸಾಕ್ಷಿಯಾಗುತ್ತದೆ. ಕಲಿಕಾ ಹಬ್ಬದ ಮೂಲಕ ಈ ಪ್ರಜ್ಞೆಯನ್ನು ಮಕ್ಕಳಲ್ಲಿ ಇನ್ನಷ್ಟು ಹೆಚ್ಚಿಸಬೇಕು ಎಂದು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕಚೇರಿಯ ಯೋಜನಾ ಸಮನ್ವಯಾಧಿಕಾರಿ ಉದಯಕುಮಾರ್ ಸಲಹೆ ನೀಡಿದರು.
ನಗರದ ಆದರ್ಶ ವಿದ್ಯಾನಿಲಯದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕ್ಲಸ್ಟರ್‌ಮಟ್ಟದ ಕಲಿಕಾ ಹಬ್ಬ ಆಯೋಜಿಸುವ 27 ಕ್ಲಸ್ಟರ್‌ನ ಸಂಪನ್ಮೂಲ ಶಿಕ್ಷಕರಿಗೆ ಆಯೋಜಿಸಿದ್ದ 2 ದಿನಗಳು ಏರ್ಪಡಿಸಿರುವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
4 ಆಯಾಮಗಳಾದ ಮಾಡು-ಆಡು, ಕಾಗದ-ಕತ್ತರಿ ಬಣ್ಣ, ಹಾಡು-ಆಡು, ಊರು ತಿಳಿಯೋಣ ಹಾಗೂ ವಿವಿಧ ಚಟುವಟಿಕೆಗಳನ್ನು ಕೈಗೊಂಡು ಪ್ರತಿ ವಿದ್ಯಾರ್ಥಿಯು ಈ ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರು ಸಂಕಲ್ಪ ಮಾಡಬೇಕು. ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಕುಗ್ಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿನೂತನ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಮಾತನಾಡಿ, ಕೋವಿಡ್ ನಂತರದಲ್ಲಿ ಮಕ್ಕಳ ಕಲಿಕೆಯ ಬಗ್ಗೆ ವಿನೂತನ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಏಕೈಕ ರಾಜ್ಯವೆಂದರೆ ಕರ್ನಾಟಕ. ಕಲಿಕಾ ಚೇತರಿಕೆ ವಿನೂತನ ಉಪಕ್ರಮದಡಿಯಲ್ಲಿ ಮಕ್ಕಳಿಗೆ ಕಲಿಕಾ ಅಂತರವನ್ನು ಸರಿದೂಗಿಸಲು ಕಲಿಕಾ ಹಾಳೆಗಳು, ಪುಸ್ತಕಗಳು, ಶಿಕ್ಷಕರ ಕೈಪಿಡಿಯನ್ನು ಸರಬರಾಜು ಮಾಡಿ ಇಲಾಖೆ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿದೆ ಎಂದರು.
ಇದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಕಲಿಕಾ ಚೇತರಿಕಾ ಮೇಳ ಮತ್ತು ಸಂಭ್ರಮ ಶನಿವಾರದ ಮೂಲಕ ಮಕ್ಕಳಿಗೆ ವಿನೂತನ ಪರಿಕಲ್ಪನೆಗಳನ್ನು ಮೂಡಿಸಿ ಅನುಭವದ ಶಿಕ್ಷಣವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 4108 ಕ್ಲಸ್ಟರ್‌ಗಳಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಉದ್ಘಾಟಿಸಿದರು. ಉಪಯೋಜನಾ ಸಮನ್ವಯಾಧಿಕಾರಿ ವೆಂಕಟಾಚಲ, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಚಂದ್ರಕುಮಾರ್, ಬಿಆರ್‌ಪಿ ಆನಂದ್‌ಕುಮಾರ್, ನಂದೀಶ್, ಪ್ರತಿಮಾ, ಮಹದೇವಸ್ವಾಮಿ, ಸುಷ್ಮಾ, ಬಿಐಇಆರ್‌ಟಿ ತ್ರಿನೇಶ್, ಪ್ರಭಾಕರ್, ಸೋಮಶೇಖರ್, ವೀರಭದ್ರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಹಾಜರಿದ್ದರು.