ಕಲಿಕಾ ಸಾಮಗ್ರಿಗಳ ವಿತರಣಾ

02 HRS 02
Published on

ಹಿರೀಸಾವೆ: ಕೆಲ ಪಾಲಕರಿಗೆ ಸರ್ಕಾರಿ ಶಾಲೆಗಳನ್ನು ಕಂಡರೆ ನಿರ್ಲಕ್ಷ್ಯ ಹಾಗೂ ನಿರುತ್ಸಾಹವಿದೆ ಎಂದು ಸಮಾಜ ಸೇವಕಿ ತೇಜಸ್ವಿನಿ ಅಸಮಾಧಾನ ವ್ಯಕ್ತಪಡಿಸಿದರು.
ಹೋಬಳಿಯ ಉಳ್ಳಾವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಚಿತ ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳಿದ್ದರೂ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಹಲವು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಪರಿಣಾಮ ಹಾಜರಾತಿ ಕೊರತೆಯಿಂದ ಸಾಕಷ್ಟು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ ಎಂದು ಆತಂಕ ಹೊರ ಹಾಕಿದರು.
ಶಾಲೆಯ 24 ವಿದ್ಯಾರ್ಥಿಗಳಿಗೆ 400 ರೂ. ಮೌಲ್ಯದ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉಚಿತ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಿದ ಸಮಾಜ ಸೇವಕರಿಗೆ ಶಾಲೆ ವತಿಯಿಂದ ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಎಸ್‌ಡಿಎಂಸಿ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಸಮಾಜ ಸೇವಕರಾದ ಮಲ್ಲಿಕಾರ್ಜುನ್, ಚೈತ್ರಾ ಮತ್ತು ರಾಘವೇಂದ್ರ, ಶಾಲೆಯ ಮುಖ್ಯಶಿಕ್ಷಕ ಕುಮಾರ್, ಸಹಶಿಕ್ಷಕಿ ಶ್ರೀದೇವಿ, ಅತಿಥಿ ಶಿಕ್ಷಕಿ ಗೀತಾ, ಅಡುಗೆ ಸಿಬ್ಬಂದಿ ಸರಸ್ವತಿ, ಎಸ್ಡಿಎಂಸಿ ಸದಸ್ಯರು ಹಾಗೂ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net